ನೀರಾವರಿ ಯೋಜನೆಗೆ ಸರ್ಕಾರದ ಆದ್ಯತೆ | ನಮ್ಮ ನೀರು ನಮ್ಮ ಹಕ್ಕು ಹೋರಾಟ | ಜಮಖಂಡಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಸ್ಪಷ್ಠನೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ”ಯುಕೆಪಿ 3ನೇ ಹಂತದ ಗೆಜೆಟ್ ಪ್ರಕಟಣೆಗಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುತ್ತದೆ” ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಭರವಸೆ ನೀಡಿದರು.
ನಗರದಲ್ಲಿ ಬುಧವಾರ ದಿ.ಜಮಖಂಡಿ ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಯಿಂದ ನದಿಯ ನೀರು ಸಮುದ್ರ ಸೇರುವುದನ್ನು ತಪ್ಪಿಸಬೇಕಿದೆ. ಕೃಷ್ಣಾ ನ್ಯಾಯಾಧೀಕರಣದ ಗೆಜೆಟ್ ಪ್ರಕಟಗೊಂಡರೆ ಆಲಮಟ್ಟಿ ಡ್ಯಾಂನಲ್ಲಿ 524 ಮೀ.ವರೆಗೆ ನೀರು ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಯುಕೆಪಿ ಮೂರನೇ ಹಂತದಲ್ಲಿ ಒಪ್ಪಿತ ಪರಿಹಾರ ವಿತರಿಸಿ ಏಕ ಕಾಲಕ್ಕೆ ಭೂಸ್ವಾಧೀನ ಕೈಗೊಂಡು ರೈತರ ಬದುಕು ಹಸನುಗೊಳಿಸುವ ಯತ್ನ ನಡೆದಿದೆ” ಎಂದರು.
”ಮಾಜಿ ಸಚಿವ ಸಿದ್ದು ನ್ಯಾಮಗೌಡ, ಮಾಜಿ ಶಾಸಕ ರಾಮಣ್ಣ ಕಲೂತಿ ಜಮಖಂಡಿ ಅಭಿವೃದ್ಧಿ ಮಾಡಿದ್ದಾರೆ. ನಾನು ಸಹಕಾರಿ ಸಚಿವನಿದ್ದಾಗ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಒದಗಿಸಿದೆ. ನಾನು ಎನ್ನುವುದಕ್ಕಿಂತ ನಾವು ಎಂದು ಕೆಲಸ ಮಾಡುವುದು ಸಹಕಾರ ಕ್ಷೇತ್ರದ ಧೈಯವಾಗಿದೆ. ನಿಂಬೆಗಿಂತ ಹುಳಿಯಿಲ್ಲ, ದುಂಬಿಗಿಂತ ಕಡೆಯಿಲ್ಲ, ಶಂಭುಗಿಂತ ಅಧಿಕ ದೇವರಿಲ್ಲ, ನಂಬಿಕೆಗಿಂತ ದೊಡ್ಡ ಗುಣವಿಲ್ಲ ಎನ್ನುವ ಸರ್ವಜ್ಞನ ವಚನ ಸಹಕಾರಿಗಳಿಗೆ ಅನ್ವಯಿಸುತ್ತದೆ” ಎಂದರು.
“ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳ ಮೂಲಕ ಪಕ್ಷ, ಜಾತಿ ಭೇದವಿಲ್ಲದೇ ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತಿದೆ. 2028ರಲ್ಲಿ ಜನ ಮತ್ತೆ ನಮಗೆ ಆಶೀರ್ವಾದ ಮಾಡಬೇಕು,” ಎಂದು ಮನವಿ ಮಾಡಿದರು.
ಪ್ರಧಾನಿ ಭೇಟಿಯಾಗೋಣ
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ “ಟ್ರಬಲ್ ಶೂಟ್ ಮಾಡುವಲ್ಲಿ ನಿಷ್ಣಾತರಾಗಿರುವ ಡಿಸಿಎಂ ಅವರು ಯುಕೆಪಿ ವ್ಯಾಜ್ಯ ಪರಿಹರಿಸಬೇಕು. ಪಕ್ಷಾತೀತವಾಗಿ ಎಲ್ಲರೂ ಪ್ರಧಾನಿ ಭೇಟಿ ಮಾಡಿ ವಿವಾದ ಬಗೆಹರಿಸಲು ಯತ್ನಿಸಬೇಕು. ಈ ಬ್ಯಾಂಕ್ ನಿರ್ದೇಶಕರಾಗಿದ್ದವರು ಸಚಿವರು, ಶಾಸಕರಾಗಿದ್ದಾರೆ ಎಂಬುದು ವಿಶೇಷ” ಎಂದು ಬಣ್ಣಿಸಿದರು.
ಡಿಸಿಎಂ ಪುತ್ಥಳಿ ಸ್ಥಾಪನೆ
ಮಾಜಿ ಸಚಿವ ಲಕ್ಷ್ಮಣ ಸವದಿ ”ಸಹಕಾರ, ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ನೀಡದ ಸಂದರ್ಭದಲ್ಲಿ ಸಹಕಾರಿ ಸಚಿವರಾಗಿದ್ದ ಶಿವಕುಮಾರ್ ಸಾಲ ಒದಗಿಸಿ ನೆರವಿಗೆ ಬಂದಿದ್ದರು. ಆಲಮಟ್ಟಿ ಡ್ಯಾಂನಲ್ಲಿ 524 ಮೀ. ಗೆ ನೀರು ನಿಲ್ಲಿಸಿದರೆ ಈ ಭಾಗದ ರೈತರ ಬಾಳು ಬೆಳಗುತ್ತದೆ. ಈ ಕಾರ್ಯ ನಡೆದರೆ ಡ್ಯಾಂನಲ್ಲಿ ಡಿಸಿಎಂ ಪುತ್ಥಳಿ ಸ್ಥಾಪಿಸುತ್ತೇವೆ” ಎಂದರು.
ಭವಿಷ್ಯದ ಶಾಸಕರು ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ ”1940ರಲ್ಲಿ ಅಪರಾವ್ ಶಿಂಧೆ ಅವರಿಂದ ಆರಂಭಗೊಂಡ ಬ್ಯಾಂಕ್ ಜಮಖಂಡಿ ಭಾಗದ ಆರ್ಥಿಕತೆಗೆ ಬಲ ಒದಗಿಸಿದೆ. ನಮ್ಮ ತಾತ ರಾಮಣ್ಣ ಕಲೂತಿ ಸೇರಿದಂತೆ ಬ್ಯಾಂಕ್ ನಿರ್ದೇಶಕರು ಶಾಸಕರಾದರು. ಮುಂದೆ ಈ ಬ್ಯಾಂಕ್ ನಿಂದ ಒಬ್ಬರು ಶಾಸಕರಾಗಿ ಹೊರಹೊಮ್ಮಲಿದ್ದಾರೆ. ಶ್ರೀಕೃಷ್ಣ ಹೇಳಿದಂತೆ ಕಾಲಚಕ್ರ ತಿರುಗುತ್ತದೆ. ಡಿಸಿಎಂ ಶಿವಕುಮಾರ್ ಅವರಿಗಾಗಿ ಒಂದು ವರ್ಷ ಕಾಯ್ದು ಇಂದು ಕಾರ್ಯಕ್ರಮ ನಡೆಸಿದ್ದೇವೆ. ಜೀವನದುದ್ದಕ್ಕೂ ಅವರ ಪರಮಶಿಷ್ಯನಾಗಿರುತ್ತೇನೆ” ಎಂದರು.
ಕನ್ನೇರಿಯ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಶಿವಲಿಂಗ ಪಂಡಿತಾರಾಧ್ಯ ಶ್ರೀ, ಹರ್ಷಾನಂದ ಶ್ರೀ, ಗೌರಿಶಂಕರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಜಗದೀಶ ಗುಡಗುಂಟಿ, ಜೆ.ಟಿ.ಪಾಟೀಲ, ಮಾಜಿ ಸಚಿವರಾದ ಮುರಗೇಶ ಸರನಾಯಕ, ನಿರಾಣಿ, ಅಜಯಕುಮಾರ್ ಎಸ್.ಆರ್.ಪಾಟೀಲ, ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ವಿಧಾನಪರಿಷತ್ ಮಾಜಿ ಸದಸ್ಯ ಜಿ. ಎಸ್.ನ್ಯಾಮಗೌಡ, ಮುಖಂಡ ಮಹಮ್ಮರ್ ನಲಪಾಡ್, ಉದ್ಯಮಿ ಸಂಗಮೇಶ ನಿರಾಣಿ, ಎ.ಎಂ.ಶಹಾ, ಕಾಡು ಮಾಳಿ, ವಿ.ಎ.ಕಂಬಿ, ಅಪ್ಪಾಸಾಬ ಮನಗೂಳಿ, ಧರೆಪ್ಪ ತೇಲಿ, ಬಸವರಾಜ ಕಲೂತಿ, ರಾಜು ಪಿಸಾಳ, ಪ್ರಭು ಜನವಾಡ, ನಂದೆಪ್ಪ ತಳವಾರ, ವೈಶಾಲಿ ಗೊಂದಿ, ಶೋಭಾ ಅರಕೇರಿ, ಗಿರೀಶ ಬಾಂಗಿ, ರಮೇಶ ಕನಕೇರಿ, ಪ್ರಧಾನ ವ್ಯವಸ್ಥಾಪಕ ಸಂಗಪ್ಪ ತುಪ್ಪದ, ವ್ಯವಸ್ಥಾಪಕ ಸಂತೋಷ ಹಲ್ಯಾಳ ಮತ್ತಿತರರಿದ್ದರು.
ಮೊಳಗಿದ ಡಿಕೆ, ಡಿಕೆ.. ಘೋಷಣೆ
ಕಾರ್ಯಕ್ರಮದಲ್ಲಿ ಆಗಾಗ ಡಿಕೆ, ಡಿಕೆ.. ಘೋಷಣೆ ಮೊಳಗಿದವು. ನಿರೂಪಕಿಯೂ ಒಂದು ಬಾರಿ ‘ಮುಂದಿನ ಮುಖ್ಯಮಂತ್ರಿ” ಎಂದು ಕರೆದರು. ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತಿದ್ದ ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಶಾಸಕ ಜಗದೀಶ ಗುಡಗುಂಟಿ ಚರ್ಚೆಯಲ್ಲಿ ತೊಡಗಿದ್ದರು. ಇತ್ತ ಬೀಳಗಿ ಕ್ಷೇತ್ರದ ಮಾಜಿ ಸಚಿವ ಮುರಗೇಶ ನಿರಾಣಿ, ಶಾಸಕ ಜೆ.ಟಿ.ಪಾಟೀಲ ಕೂಡ ಗಹನ ಚರ್ಚೆ ನಡೆಸಿದ್ದರು.

ಗ್ಯಾರಂಟಿಯಿಂದ ಅನುದಾನ ಕಡಿತ
“ಯುಕೆಪಿಗೆ ವರ್ಷಕ್ಕೆ 40 ಸಾವಿರ ಕೋಟಿ ರೂ. ಒದಗಿಸುವ ಪ್ರಯತ್ನ ಗ್ಯಾರಂಟಿ ಯೋಜನೆಗಳಿಂದ ಸಾಧ್ಯವಾಗಿಲ್ಲ. ಪ್ರಸಕ್ತ ವರ್ಷ ನೀರಾವರಿಗೆ 22 ಸಾವಿರ ಕೋಟಿ ರೂ. ಮೀಸಲಿರಿಸಿದ್ದೇವೆ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡಲಾಗಿದೆ.”
– ಡಿ.ಕೆ.ಶಿವಕುಮಾರ್
ಉಪ ಮುಖ್ಯಮಂತ್ರಿಗಳು

ನೀವು ಸಿಎಂ ಆದರೆ..
“ಸಚಿವ ‘ಸಹಕಾರ ಚಳವಳಿ ರಾಜ್ಯದಲ್ಲಿ ಆರಂಭವಾದರೂ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ವಿಸ್ತರಿಸಿದರು. ಅವರು ಸಿಎಂ ಆದಾಗಲೂ ಸಹಕಾರ ಖಾತೆ ತಮ್ಮ ಬಳಿ ಇಟ್ಟುಕೊಂಡು ಅಭಿವೃದ್ಧಿಪಡಿಸಿದರು. ನೀವು ಸಿಎಂ ಆದರೆ ಸಹಕಾರ ಖಾತೆ ನಿಮ್ಮ ಬಳಿ ಇಟ್ಟುಕೊಂಡು ಈ ವಲಯಕ್ಕೆ ಆದ್ಯತೆ ಕೊಡಬೇಕು. ಯುಕೆಪಿ ವ್ಯಾಜ್ಯ ಪರಿಹರಿಸಿ ಆಲಮಟ್ಟಿ ಡ್ಯಾಂನಲ್ಲಿ 524 ಮೀ.ಗೆ ನೀರು ನಿಲ್ಲಿಸಿದರೆ ನಿಮ್ಮ ಚಿನ್ನದ ಮೂರ್ತಿ ಸ್ಥಾಪಿಸುತ್ತೇವೆ”
– ಶಿವಾನಂದ ಪಾಟೀಲ
ಜವಳಿ, ಕಬ್ಬು ಮತ್ತು ಸಕ್ಕರೆ ಖಾತೆ ಸಚಿವರು

