ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ತಹಸೀಲ್ದಾರ ಕಚೇರಿಗೆ ಬುಧವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಕಂದಾಯ ಇಲಾಖೆಗಳಲ್ಲಿ ನಡೆಯುತ್ತಿರುವ ವಿವಿಧ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿರುವ ಬಗ್ಗೆ ಮತ್ತು ಸಾರ್ವಜನಿಕರಿಗೆ ಏನಾದರೂ ತೊಂದರೆಗಳಾಗುತ್ತಿವೆಯಾ ಎಂಬ ಬಗ್ಗೆ ಪರಿಶೀಲಿಸಲು ಭೇಟಿ ನೀಡಿದ್ದೇವೆ. ಜೊತೆಗೆ ಪುರಸಭೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್, ಮೆಗಾ ಮಾರುಕಟ್ಟೆ, ಎಸ್‌ಡಿಪಿ, ಎಫ್‌ಎಸ್‌ಡಿಪಿ, ಕಸ ವಿಲೇವಾರಿ ಘಟಕಗಳನ್ನು ವೀಕ್ಷಣೆ ಮಾಡಿದ್ದೇವೆ. ಇಲ್ಲಿನ ಮೆಘಾ ಮಾರುಕಟ್ಟೆ ಟೆಂಡರ್ ಪ್ರಕ್ರೀಯೆಯಲ್ಲಿದ್ದು ಒಂದೆರಡು ವಾರಗಳಲ್ಲಿ ಭೂಮಿ ಪೂಜೆ ಮಾಡಿ ಕೆಲಸ ಪ್ರಾರಂಭಿಸಲಾಗುವದು, ಇಂದಿರಾ ಕ್ಯಾಂಟೀನ ಕಾಮಗಾರಿ ಪೂರ್ಣಗೊಂಡಿದ್ದು, ಸಾಮಗ್ರಿಗಳು ಮತ್ತು ಕೆಲಸದ ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿದ್ದು ಇದೇ ತಿಂಗಳಿನಲ್ಲಿ ಪ್ರಾರಂಭಗೊಳ್ಳಲಿದೆ ಎಂದರು.
ಈ ವೇಳೆ ತಹಸೀಲ್ದಾರ ಬಲರಾಮ ಕಟ್ಟಿಮನಿ, ಎಎಲ್‌ಡಿಆರ್ ಶಿವಾನಂದ ಸಜ್ಜನ, ಶಿರಸ್ತೇದಾರ ಎಂ.ಎಂ.ಬಾಗೇವಾಡಿ, ಕಂದಾಯ ನಿರೀಕ್ಷಕರುಗಳಾದ ವೆಂಕಟೇಶ ಅಂಬಿಗೇರ, ಮಹಾಂತೇಶ ಮಾಗಿ, ತಲಾಟೆಗಳಾದ ಮನೋಜ ರಾಠೋಡ, ರಿಯಾಜ ನಾಯ್ಕೋಡಿ ಸೇರಿದಂತೆ ಮತ್ತೀತರರು ಇದ್ದರು.
ಸಮರ್ಪಕ ಕಾರ್ಯ ನಿರ್ವಹಿಸದಿದ್ದಲ್ಲಿ ಶಿಸ್ತು ಕ್ರಮ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಶಿಕ್ಷಣಾಧಿಕಾರಿಗಳು ಸಮರ್ಪಕ ನಿರ್ವಹಣೆ ಮಾಡಿಲ್ಲ. ಎಲ್ಲ ಸೆಂಟರ್‌ಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ನಾಲ್ಕು ಜನರ ವಿರುದ್ಧ ಇಲಾಖೆ ವಿಚಾರಣೆ ನಡೆದಿದೆ. ಇಬ್ಬರನ್ನು ಅಮಾನತ್ತು ಮಾಡುವ ಹಂತದಲ್ಲಿದೆ. ಪರೀಕ್ಷೆಯಲ್ಲಿ ಯಾರಾದರೂ ಸಮರ್ಪಕ ಕಾರ್ಯ ನಿರ್ವಹಿಸದೇ ಇದ್ದಲ್ಲಿ ಶಿಕ್ಷಣಾಧಿಕಾರಿಗಳೇ ಇರಲಿ ಶಿಕ್ಷಕರೇ ಇರಲಿ ಅವರ ಮೇಲೆ ಸೂಕ್ತ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದರು.

“ಪಟ್ಟಣದ ತಹಶಿಲ್ದಾರ ಕಚೇರಿ ಶಿಥಿಲಾವಸ್ಥೆಯಲ್ಲಿರುವದನ್ನು ಪರಿಶೀಲಿಸಿ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಂದ ಬಳಿಕ ಕಟ್ಟಡದ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವದು.”
– ಟಿ.ಭೂಬಾಲನ್ ಜಿಲ್ಲಾಧಿಕಾರಿಗಳು

