ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚಿನ ದಿನಗಳಲ್ಲಿ ಬಸವನಬಾಗೇವಾಡಿಯಲ್ಲಿ ಜರುಗಿದ ಪ್ರತಿಭಟನೆಯಲ್ಲಿ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ) ಇವರ ಪರವಾಗಿ ಹಾಗೂ ಬಿಜೆಪಿಯ ವಿರುದ್ದವಾಗಿ ಮಾತನಾಡುವ ಸಮಯದಲ್ಲಿ ಲಕ್ಷ್ಮಿ ಪಾಟೀಲ ಎಂಬುವಳು ಸರಕಾರದ ನಿಷೇಧಿತ ಪದವನ್ನು ಬಳಸಿದ್ದರ ಕುರಿತು ವಿಜಯಪುರ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ, ವಿಜಯಪುರ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಿ ಜಿ.ಕತ್ನಳ್ಳಿ ಮಾತನಾಡಿ, ಲಕ್ಷ್ಮಿ ಪಾಟೀಲ ಎಂಬುವಳು ಸರಕಾರದ ನಿಷೇಧಿತ ಪದವಾದ ಹಜಾಮ ಎನ್ನುವ ಪದವು ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವದನ್ನು ನೋಡಿ ನಮ್ಮ ಕೌರಿಕ ಸ್ವಾಭಿಮಾನಿ ಸಮಾಜಕ್ಕೆ ಮುಜುಗರವನ್ನುಂಟು ಮಾಡಿದೆ. ಹಾಗೂ ಕ್ಷೌರಿಕ ವೃತ್ತಿಗೆ ಅವಮಾನಿಸಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಡಪದ (ಉತ್ನಾಳ) ಮಾತನಾಡಿ, ಹಡಪದ ಅಪ್ಪಣ್ಣ ಸಮಾಜದ ಕುರಿತು ಲಕ್ಷ್ಮಿ ಪಾಟೀಲ ಎಂಬುವಳು ಮಾತನಾಡಿದ ನಿಷೇಧಿತ ಪದದಿಂದ ಹಡಪದ ಸಮಾಜಕ್ಕೆ ತೀವ್ರ ತರಹದ ನೋವುಂಟಾಗಿದೆ. ಕಾರಣ ಕೂಡಲೇ ಲಕ್ಷ್ಮಿ ಪಾಟೀಲ ಇವರನ್ನು ಬಂಧಿಸಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವಿರುಪಾಕ್ಷಿ ಜಿ.ಕತ್ನಳ್ಳಿ, ಜಿಲ್ಲಾ ಉಪಾದ್ಯಕ್ಷರಾದ ಬಾಬು ಹಡಪದ, ಕೋಶಾಧ್ಯಕ್ಷ ನಿಂಗಪ್ಪ ನಾವಿ, ಸಂಘಟನಾ ಕಾರ್ಯದರ್ಶಿ ಮಲ್ಲೇಶಿ ನಾವಿ, ಹಾಗೂ ಬಿ.ಡಿ.ಎ. ಸದಸ್ಯರಾದ ಕಾಶೀಬಾಯಿ ಹಡಪದ, ಹಾಗೂ ಸಂಘದ ಸದಸ್ಯರಾದ ಸಂಜೀವ ಶಿವಣಗಿ, ಶರಣಬಸು ಹಡಪದ, ಬಸವರಾಜ ಹಡಪದ (ಬೇಕಿನಾಳ) ಚಿದಾನಂದ ತೊರವಿ ಇನ್ನಿತರರು ಉಪಸ್ಥಿತರಿದ್ದರು.

