ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ರಂಗಭೂಮಿಯಲ್ಲಿ ಜಾನಪದ ಕಲೆಗೆ ಶ್ರೇಷ್ಠ ಸ್ಥಾನವಿದೆ. ಸಣ್ಣಾಟ, ದೊಡ್ಡಾಟ, ಯಕ್ಷಗಾನ ಎಂಬ ಆಟಗಳು ಜಾನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿವೆ ಎಂದು ಕತಕನಹಳ್ಳಿ ಗುರು ಚಕ್ರವರ್ತಿ ಬಬಲಾದಿ ಸದಾಶಿವ ಮಠದ ಶಿವಯ್ಯ ಸ್ವಾಮೀಜಿ ಹೇಳಿದರು
ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ “ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನ ” ಉದ್ಘಾಟಿಸಿ ಮಾತನಾಡುತ್ತಾ ಜಾನಪದ ಕಲೆ ನಮ್ಮ ಬದುಕಿನ ಭಾಗವಾಗಿದೆ. ನಮ್ಮ ಸಂಸಾರದ ಗುಟ್ಟು ಜಾನಪದ ಕಲೆಯಲ್ಲಿ ಅಡಗಿದೆ. ಅದಕ್ಕಾಗಿ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಕರ್ಣಾಟಕ ಬಯಲಾಟ ಅಕಾಡೆಮಿ ಸದಸ್ಯೆ ಶ್ರೀಮತಿ ಅನಸೂಯಾ ವಡ್ಡರ ಮಾತನಾಡಿ ಜಾನಪದ ಕಲಾವಿದರು ಕಲೆಯನ್ನು ಬೆಳೆಸುತ್ತಾ ಬಡತನದಲ್ಲಿ ಬದುಕು ಕಳೆಯುತ್ತಿದ್ದಾರೆ. ಸರಕಾರ ಮತ್ತು ಸಮಾಜದವರು ಕಲಾವಿದರಿಗೆ ಸಹಾಯ ಮಾಡಬೇಕು ಎಂದರು.
ಬಬಲೇಶ್ವರದ ವೆಂಕಟೇಶ್ವರ ಪಾರಿಜಾತ ತಂಡದ ಮುಖ್ಯಸ್ಥೆ ಅಂಜಲಿ ಪವಾರ ಹಾಗೂ ತಂಡದ ಕಲಾವಿದರಿಂದ ಇಡಿ ರಾತ್ರಿ ಪಾರಿಜಾತ ಪ್ರದರ್ಶನ ನಡೆಯಿತು.

