ರಂಜಾನ್ ಹಬ್ಬದ ಮರುದಿನ ಮುಸ್ಲಿಮರು ಆಲಮಟ್ಟಿಯ ಉದ್ಯಾನಕ್ಕೆ ಭೇಟಿ ನೀಡುವುದು ವಾಡಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ರಂಜಾನ್ ಹಬ್ಬದ ಅಂಗವಾಗಿ ಆಲಮಟ್ಟಿಯ ವಿವಿಧ ಉದ್ಯಾನಗಳಿಗೆ ಮಂಗಳವಾರ ೧೦ ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದರು.
ರಾಕ್ ಉದ್ಯಾನವಂತೂ ಪ್ರವಾಸಿಗರಿಂದ ತುಂಬಿತ್ತು.
ಪ್ರತಿ ವರ್ಷ ರಂಜಾನ್ ಹಬ್ಬದ ಮರುದಿನ ಮುಸ್ಲಿಮರು ಆಲಮಟ್ಟಿಯ ವಿವಿಧ ಉದ್ಯಾನಕ್ಕೆ ಭೇಟಿ ನೀಡುವುದು ಹೆಚ್ಚು.
ಬೆಳಿಗ್ಗೆಯಿಂದಲೇ ಕಾರು, ಟಂಟಂ, ಬಸ್ ಹಾಗೂ ರೈಲಿನ ಮೂಲಕ ಆಗಮಿಸಿದ ಸಹಸ್ರಾರು ಪ್ರವಾಸಿಗರು ರಾಕ್ ಉದ್ಯಾನದ ಮುಂದೆ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು.
ಮಧ್ಯಾಹ್ನದ ನಂತರ ಉದ್ಯಾನ ಗಳಲ್ಲಿ ಜನಜಂಗುಳಿ ಇನ್ನಷ್ಟು ಹೆಚ್ಚಿತು. ಸಂಜೆಯವರೆಗೂ ಜನ ಬರುತ್ತಲೆ ಇದ್ದರು. ಬುತ್ತಿ ಕಟ್ಟಿಕೊಂಡು ಕುಟುಂಬ ಸಮೇತರಾಗಿ ಬಂದು ರಾಕ್ ಉದ್ಯಾನ ಸೇರಿ ನಾನಾ ಕಡೆ ಊಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೃಷ್ಣಾ ನದಿಯ ತಟದಲ್ಲಿಯೂ ಜನಜಂಗುಳಿ ಹೆಚ್ಚಿತ್ತು.
ಟಂಟಂ, ಟ್ರಾಕ್ಸ್, ಕಾರ್, ಬೈಕ್, ಮೂಲಕ ಉದ್ಯಾನಕ್ಕೆ ಬರುವವರ ಸಂಖ್ಯೆಯೂ ಹೆಚ್ಚಿತ್ತು. ಚಕ್ಕುಲಿ, ಐಸ್‌ಕ್ರೀಂ, ನೀರು, ದಿಢೀರ್ ಫೋಟೋ ತೆಗೆಯುವವರ ವ್ಯಾಪಾರ ಜೋರಾಗಿತ್ತು.
ಸಂಜೆಯ ವೇಳೆಗೆ ಸಂಗೀತ ಕಾರಂಜಿ ಉದ್ಯಾನದ ಬಳಿ ಪ್ರವಾಸಿಗರು ಹೆಚ್ಚಾಗಿದ್ದರು.
ಆಲಮಟ್ಟಿ, ನಿಡಗುಂದಿ ಪೊಲೀಸರು, ಕೆಎಸ್ಐಎಸ್ ಎಫ್ ಪೊಲೀಸರು ಸೂಕ್ತ ಬಂದೋಬಸ್ತ ಏರ್ಪಡಿಸಿದ್ದರು.

