ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಈರುಳ್ಳಿ ತುಂಬಿದ ಕ್ಯಾಂಟರ್ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ಹಾಗೂ ಲಾರಿಗೆ ಡಿಕ್ಕಿ ಹೊಡೆದು ಕ್ಯಾಂಟರ್ ಉರುಳಿ ಬಿದ್ದ ಘಟನೆ ಸಂಗೀತ ಕಾರಂಜಿಯಿರುವ ಉದ್ಯಾನದ ಬಳಿ ಶನಿವಾರ ಸಂಜೆ ಜರುಗಿದೆ.
ಕೊಲ್ಹಾರದಿಂದ ಈರುಳ್ಳಿ ತುಂಬಿಕೊಂಡು ಬಂಗಾರಪೇಟದತ್ತ ಹೊರಟಿದ್ದ ಕ್ಯಾಂಟರ್ ಆಲಮಟ್ಟಿ ಡ್ಯಾಂ ವೃತ್ತದಿಂದ ಆಲಮಟ್ಟಿ ಪೆಟ್ರೋಲ್ ಪಂಪ್ ರಸ್ತೆಗೆ ಹೋಗುತ್ತಿದ್ದಾಗ ಇಳಿಜಾರಿನಲ್ಲಿ ಬ್ರೇಕ್ ವಿಫಲಗೊಂಡಿದೆ. ಮೊದಲು ಕಾರಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿ ನಿಂತಿದ್ದ ಕ್ರೂಸರ್ ಗೆ ಡಿಕ್ಕಿ ಹೊಡೆದಿದೆ. ಆದರೆ ಯಾರಿಗೂ ಏನೂ ಆಗಿಲ್ಲ.
ಕ್ರೂಸರ್ ವಾಹನ ರಸ್ತೆಯ ವಿಭಜಕದ ಮೇಲೆ ಹೋಗಿ ನಿಂತಿದೆ. ಕಾರಿನ ಹಿಂಬದಿ ನಜ್ಜುಗುಜ್ಜಾಗಿದೆ.
ಕ್ಯಾಂಟರ್ ಉರುಳಿಬಿದ್ದ ಪರಿಣಾಮ,
ಈರುಳ್ಳಿ ಚೀಲಗಳು ರಸ್ತೆಯ ಮೇಲೆ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಕ್ಯಾಂಟರ್ ಇನ್ನೂ ೫೦ ಮೀ ಮುಂದೆ ಬಂದು ಉರುಳಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.
ಆಲಮಟ್ಟಿ ಅಣೆಕಟ್ಟು ವೃತ್ತ ಹಾಗೂ ಉದ್ಯಾನದ ರಸ್ತೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ ಕಾರಣ ಭಾರಿ ವಾಹನ ಪ್ರವೇಶ ನಿಷೇಧವಿದೆ. ಆದರೂ ಈರುಳ್ಳಿ ತುಂಬಿದ ವಾಹನ ಈ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು.

