ಬಿರುಬೇಸಿಗೆಯಲ್ಲಿ ನೀರಿನ ಬವಣೆ | ದಿನದಿಂದ ದಿನಕ್ಕೆ ಬತ್ತುತ್ತಿರುವ ಶ್ರಮಬಿಂದು ಸಾಗರ ಬ್ಯಾರೇಜ್ | ಜನಸಾಮಾನ್ಯರಲ್ಲಿ ಆತಂಕ!
ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್.ಎಮ್.ಇಟ್ಟಿ
ಜಮಖಂಡಿ: ತಾಲೂಕಿನ ನೀರಿನ ಮೂಲಗಳಾದ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ, ಜಂಬಗಿ ಸೇತುವೆ ಬಳಿ ನೀರು ಬತ್ತಿ ಹೋಗುತ್ತಿದ್ದು ತಾಲೂಕಿನಾದ್ಯಂತ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣಿ ತುಸು ತಟ್ಟಲಿದ್ದು ಮೇ ತಿಂಗಳಿಂದ ಜೂನ ವರೆಗೆ ಒಂದು ತಿಂಗಳು ಕುಡಿಯುವ ನೀರಿನ ತೊಂದರೆ ಉಂಟಾಗಲಿದೆ ಎಂಬ ಆತಂಕ ಕಾಡುತ್ತಿದೆ.
ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗಿದ್ದು ಬಾಯಾರಿಗೆ ನಿವಾರಿಸಲು ನೀರು ಅತ್ಯವಶ್ಯವಾಗಿದೆ. ನೀರು ಪ್ರಾಣಿ ಸಂಕುಲದ ಮುಖ್ಯ ಜೀವಾಳವಾಗಿದೆ. ನೀರನ್ನು ಮಿತವಾಗಿ ಬಳಸಿ, ಪ್ರಾಣಿ ಪಕ್ಷಿಗಳಿಗೆ, ಜಾನುವಾರಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕಾಗಿದೆ, ನೀರನ್ನು ಮಿತವಾಗಿ ಬಳಸಬೇಕಿದೆ.
ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿ 5 ಟಿಎಂಸಿ ನೀರಿನ ಸಂಗ್ರಹವಿದ್ದು ಬೇಸಿಗೆಯನ್ನು ನೀಗಿಸಬಹುದಾಗಿದ್ದು ಆದರು ಒಂದು ತಿಂಗಳವರೆಗೆ ತುಸು ತೊಂದರೆ ಉಂಟಾಗಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಸದ್ಯಕ್ಕೆ ಅಷ್ಟೇನು ತೊಂದರೆ ಉಂಟಾಗದಿದ್ದು ಬೇಸಿಗೆಯ ಬಿಸಿ 1 ತಿಂಗಳು ತಟ್ಟಲಿದೆ ಎಂದು ನದಿತೀರದ ಜನರನ್ನು ಕಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ನದಿ ಬಾಗದ ರೈತರಿಗೆ ಕೃಷಿ ಹಾಗೂ ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಲಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಮಲ್ಟಿ ವಿಲೇಜ ಸ್ಕೀಮ್ ಅಡಿಯಲ್ಲಿ ಬರುವ ನದಿ ತೀರದ ಗ್ರಾಮಗಳಿಗೆ ವಿದ್ಯುತ 7ಗಂಟೆ ಬದಲಿಗೆ ವಿದ್ಯುತ್ ಕಡಿತಗೊಳಿಸಲು ಪ್ರಪೋಸಲ್ ಕಳಿಸಲಾಗಿದ್ದು ಇದರಿಂದ ರೈತರು ನದಿಯಿಂದ ನೀರನ್ನು ಬಳಸಿಕೊಳ್ಳುವುದನ್ನು ಕಡಿಮೆ ಮಾಡಬಹುದು.
ಕಾರಣ ಸಾರ್ವಜನಿಕರು ಈಗಿನಿಂದಲೇ ನೀರನ್ನು ಸಾಧ್ಯವಾದಷ್ಟೂ ಮಿತವಾಗಿ ಬಳಸುವುದನ್ನು ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ಬರಲಿರುವ ದಿನಗಳಲ್ಲಿ ಹನಿ ನೀರಿಗೂ ಬೆಲೆ ತೆರಬೇಕಾದೀತು, ಎಚ್ಚರವಿರಲಿ!

“ನಗರದಲ್ಲಿನ ಕಟ್ಟೆಕೆರೆ, ಲಕ್ಕನಕೆರೆ, ಮಹಾರಾಣಿ ಕೆರೆ, ಹುನ್ನೂರ ಕೆರೆ, ಸೇರಿದಂತೆ ಎಲ್ಲಾ ಕೆರೆಗಳು ಭರ್ತಿ ಇದ್ದು ಕುಡಿಯುವ ನೀರಿನ ತೋಂದರೆ ನಿವಾರಿಸಲು ಕೆರೆಗಳನ್ನು ತುಂಬಿಸಲಾಗಿದೆ ಮತ್ತು ಕೊಳವೆ ಭಾವಿಗಳನ್ನು ರಿಪೇರಿ ಮಾಡಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ನೀರಿನ ತೊಂದರೆ ಉಂಟಾದರೆ ಪ್ರತಿ ಹಳ್ಳಿಯಲ್ಲೂ ಐದಾರು ರೈತರ ಖಾಸಗಿ ಕೊಳವೆ ಭಾವಿಗಳನ್ನು ಗುರುತಿಸಲಾಗಿದ್ದು ತೊಂದರೆ ಉಂಟಾದಾಗ ಬಾಡಿಗೆ ಪಡೆದು ಬವಣಿ ನೀಗಿಸುವ ವ್ಯವಸ್ಥೆ ಕಲ್ಪಿಸಲು ಮುಂಜಾಗ್ರತೆ ವಹಿಸಿದೆ. ಅದರಂತೆ ಕೊಯ್ನಾ ಜಲಾಶಯದಿಂದ ಹೆಚ್ಟಿನ ನೀರು ಬೀಡುಗಡೆಗೆ ಸರ್ಕಾರಕ್ಕೆ ಮನವಿಸಲ್ಲಿಸಲಾಗಿದ್ದು. ನಗರ ಮತ್ತು ಗ್ರಾಮೀಣ ಭಾಗದ ಜನರು, ರೈತರು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಲು ತಾಲೂಕು ಆಡಳಿತದಿಂದ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುತ್ತೆವೆ.”
– ಸದಾಶಿವ ಮಕ್ಕೊಜಿ
ತಹಶೀಲ್ದಾರರು, ಜಮಖಂಡಿ
ನೀರಿನ ಕೊರತೆ ಸಾಧ್ಯತೆಯ ಗ್ರಾಮಗಳು
ಮುತ್ತೂರ, ಕಂಕಣವಾಡಿ, ಜಂಬಗಿ, ಹಿರೇಪಡಸಲಗಿ, ಚಿಕ್ಕಪಡಸಲಗಿ, ತುಬಚಿ, ಗೋಠೆ, ಗದ್ಯಾಳ, ಸಾವಳಗಿ, ಅಡಿಹುಡಿ, ಟಕ್ಕಳಕಿ, ಕೊಣ್ಣುರ, ಮರೆಗುದ್ದಿ ಸೇರಿದಂತೆ ಅನೇಕ ಗ್ರಾಮಗಳು ನೀರಿನ ಬವಣೆ ಅನುಭವಿಸುವ ಸಾಧ್ಯತೆ ಇದೆ.

