ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮೋ ನಗರ ಸೃಷ್ಟಿಸಿ ಪ್ರಧಾನಿ ಮೋದಿಯವರ ಹೆಸರಲ್ಲಿ ವಸತಿರಹಿತ ಸಾವಿರಾರು ಬಡವರಿಗೆ ಸೂರು ಕಲ್ಪಿಸಿದಲ್ಲದೇ, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿ ಶಾಲೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನಿಜವಾದ ಬಡವರಬಂಧು ಎನಿಸಿಕೊಂಡಿರುವ ಹಿಂದೂ ಹುಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಮಾಡಿರುವ ದೊಡ್ಡ ಅನ್ಯಾಯ ಎಂದು ಬಿಜೆಪಿ ನಾಯಕ, ವಿಡಿಎ ಸದಸ್ಯ ವಿಕ್ರಮ ಗಾಯಕವಾಡ ಆಕ್ರೋಶ ವ್ಯಕ್ತಪಡಿದ್ದಾರೆ.
ಹಿಂದುತ್ವದ ಅದಮ್ಯ ಶಕ್ತಿಯಾಗಿರುವ ಶಾಸಕ ಯತ್ನಾಳ ಅವರು ಕಳಂಕರಹಿತ ಪಕ್ಷನಿಷ್ಠ ನಾಯಕರು. ಇಡಿ ದೇಶದಲ್ಲೇ ವಕ್ಫ್ ವಿರುದ್ಧ ಮೊದಲು ಧ್ವನಿ ಎತ್ತಿ ಹಿಂದೂಗಳ ಮಠಮಂದಿರ, ರೈತರ ಆಸ್ತಿ, ಅಸ್ತಿತ್ವ ಉಳಿಸುವಲ್ಲಿ ಮುಂಚೂಣಿಯಾಗಿ ನಿಂತವರು. ನೇರನುಡಿ, ಸ್ವಚ್ಚ, ಜನಪರ ಸೇವೆ ಸಲ್ಲಿಸುತ್ತಾ ಪ್ರತಿಯೊಬ್ಬ ಹಿಂದೂ ಮನೆ ಮನದಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ ಇಂತಹ ಧೀಮಂತ ನಾಯಕನ ಉಚ್ಚಾಟನೆಯನ್ನು ಬಿಜೆಪಿ ಕೇಂದ್ರ ವರಿಷ್ಠರು ಕೂಡಲೇ ಹಿಂಪಡೆದು ಬಿಜೆಪಿ ಪಕ್ಷ ಬಲವರ್ಧನೆ ಜೊತೆಗೆ ಜನಸಾಮಾನ್ಯರ ಅಭಿವೃದ್ಧಿಗಾಗಿ ಯತ್ನಾಳರಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ವಿಕ್ರಮ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.

