ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಹೊರಡಿಸಿರುವ ಆದೇಶವನ್ನು ಜಿಲ್ಲಾ ಬಿಜೆಪಿ ಕೋರ ಕಮಿಟಿ ಅನುಮೋದಿಸಿದೆ.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಪಕ್ಷದ ಜಿಲ್ಲಾಧ್ಯಕ್ಷ ಗುರಲಿಂಗಪ್ಫ ಅಂಗಡಿ ಅಧ್ಯಕ್ಷತೆಯಲ್ಲಿ ನಡೆದ ಕೋರಕಮಿಟಿ ಸಭೆಯಲ್ಲಿ ಶಾಸಕ ಯತ್ನಾಳರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಕುರಿತು ಸುದೀರ್ಘ ಸಮಾಲೋಚನೆ ನಡೆಸಿ ಅಂತಿಮವಾಗಿ ಕೇಂದ್ರ ಶಿಸ್ತು ಸಮಿತಿಯ ವರಿಷ್ಠರು ಕೈಗೊಂಡ ನಿರ್ಣಯವನ್ನು ಅನುಮೋದಿಸಲಾಯಿತು.
ಸಭೆಯ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಗುರಲಿಂಗಪ್ಫ ಅಂಗಡಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಕೇಂದ್ರ ಶಿಸ್ತು ಸಮಿತಿಯ ಆದೇಶ ಪತ್ರದ ಸಾರಾಂಶವನ್ನು ಓದಿ ಹೇಳಿದರು.
ಇದು ರಾಷ್ಟ್ರಮಟ್ಟದಲ್ಲಿ ಆಗಿರುವ ನಿರ್ಣಯ. ಇದು ರಾಷ್ಟ್ರಮಟ್ಟದಲ್ಲಿ ಆಗಿದೆ. ಪಕ್ಷದ ಕೇಂದ್ರ ಶಿಸ್ತು ಸಮಿತಿಯ ವರಿಷ್ಠರು ಶಾಸಕ ಯತ್ನಾಳ ಅವರಿಗೆ ಶೋಕಾಸ್ ನೋಟೀಸ್ ನೀಡಿ, ಅವರಿಂದ ಉತ್ತರ ಪಡೆದುಕೊಂಡು ಎಲ್ಲ ಮುಂದಿನ ಸಾಧಕ ಬಾಧಕಗಳ ಬಗ್ಗೆ ಪರಾಮರ್ಶೆ ಮಾಡಿಯೇ ಈ ನಿರ್ಣಯ ಕೈಗೊಂಡಿದೆ. ಅವರ ಉಚ್ಛಾಟನೆ ಆದೇಶ ಪುನರ್ ಪರಿಶೀಲನೆ ಮಾಡುವುದಾಗಲೀ, ಅವರನ್ನು ಮರಳಿ ಪಕ್ಷದಲ್ಲಿಯೇ ಉಳಿಸಿಕೊಳ್ಳುವುದಾಗಲೀ ಕೇಂದ್ರ ಸಮಿತಿಯಲ್ಲಿಯೇ ನಿರ್ಣಯ ಆಗಬೇಕು. ಅವರ ಉಚ್ಛಾಟನೆಯಿಂದ ಅವರ ಬೆಂಬಲಿಗರಿಗೆ ನೋವಾಗುವುದು ಸಹಜ. ಇಂಥ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವುದು, ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ. ಅವರ ಭಾವನೆ ನಮಗೂ ಅರ್ಥವಾಗುತ್ತದೆ. ಹಾಗಂತ ನಮ್ಮ ಪಕ್ಷದ ನಾಯಕರಿಗೆ ಅವಮಾನ ಮಾಡುವ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ ಎಂದರು.
ಇಂದು ನಡೆದ ಪಕ್ಷದ ಜಿಲ್ಲಾ ಕೋರಕಮೀಟಿ ಸಭೆಯಲ್ಲಿಯೂ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯ ಪೂರ್ವತಯಾರಿಯ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಫ ಅಂಗಡಿ ಹೇಳಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಮಾತನಾಡಿ, ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ಶೀಘ್ರವೇ ಪಕ್ಷದ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿದೆ. ಈ ಸಮಾವೇಶಕ್ಕೆ ಪಕ್ಷದ ರಾಜ್ಯ ನಾಯಕರನ್ನೂ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಪಕ್ಷದ ಮುಖಂಡರಾದ ಸುರೇಶ ಬಿರಾದಾರ, ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಗೋಪಾಲ ಘಟಕಾಂಬಳೆ, ಈರಣ್ಮ ರಾವೂರ, ವಿಜಯ ಜೋಶಿ, ಪತ್ರಿಕಾಗೋಷ್ಟಿಯಲ್ಲಿದ್ದರು.

ಪಂಚಮಸಾಲಿ ಶ್ರೀಗಳಿಗೆ ಕಿವಿಮಾತು
ಬಿಜೆಪಿಯಿಂದ ಶಾಸಕ ಯತ್ನಾಳ ಅವರನ್ನು ಉಚ್ಛಾಟಿಸಿರುವ ರಾಜಕೀಯ ವಿಷಯವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರುಗಳು ಒಂದು ಜಾತಿಗೆ ಕೊಂಡೊಯ್ಯುತ್ತಿರುವುದು, ಜಾತಿ ಎತ್ತಿ ಕಟ್ಟುವುದು ಸರಿಯಲ್ಲ. ರಾಜಕೀಯ ವಿಷಯ ರಾಜಕೀಯವಾಗಿಯೇ ಎದುರಿಸಬೇಕಾಗುತ್ತದೆ. ಮುಂದೆ ಏನೇ ಆಗಲಿ, ಇದು ರಾಜಕೀಯವಾಗಿಯೇ ನಿರ್ಣಯವಾಗಬೇಕು. ರಾಜಕೀಯ ವಿಷಯ ಜಾತಿಗೆ ಸಮೀಕರಣಗೊಳಿಸಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಕಿವಿಮಾತು ಹೇಳಿದರು.

“ನನಗೆ ಯಾರ ಭಯವೂ ಇಲ್ಲ. ಧೈರ್ಯದಿಂದಲೇ ನಾನು ಪಕ್ಷದ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವೆ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ನಮಗೆ ವ್ಯಕ್ತಿ ಮುಖ್ಯವಲ್ಲ, ಪಕ್ಷ, ತತ್ವ ಸಿದ್ಧಾಂತ ಮುಖ್ಯ. ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಸದೃಢವಾಗಿದೆ. ಗ್ರಾಮಮಟ್ಟದಿಂದ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ತಯತ್ನವನ್ನು ನಾವು ಮಾಡುತ್ತೇವೆ.”
– ಗುರಲಿಂಗಪ್ಫ ಅಂಗಡಿ
ಬಿಜೆಪಿ ಜಿಲ್ಲಾಧ್ಯಕ್ಷರು