ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದವರಿಗೆ ಸತತವಾಗಿ ಉದ್ಯೋಗ ಕಲ್ಪಿಸುವ ಅಂಗವಾಗಿ ಜಿಲ್ಲಾ ಪಂಚಾಯತಿ ವತಿಯಿಂದ ದುಡಿಯೋಣ ಬಾ ಅಭಿಯಾನ ಆಯೋಜಿಸಲಾಗಿದೆ. ಮಾರ್ಚ್ ೧೫ ರಿಂದ ಜಿಲ್ಲೆಯ ೧೩ ತಾಲೂಕಿನಲ್ಲಿ ದುಡಿಯೋಣ ಬಾ ಅಭಿಯಾನ ಯಶಸ್ವಿಯಾಗಿ ಆರಂಭವಾಗಿದ್ದು, ಜೂನ್ ಮಾಹೆಯ ಅಂತ್ಯದವರೆಗೆ ಈ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ತಿಳಿಸಿದ್ದಾರೆ.
ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ೧೦೦ ದಿನಗಳ ಉದ್ಯೋಗ ಪಡೆಯಲು ಅವಕಾಶವಿದೆ. ಬೇಸಿಗೆ ಅವಧಿಯಲ್ಲಿ ೧೦೦ ದಿನ ಕೆಲಸ ನಿರ್ವಹಿಸಿದ್ದಲ್ಲಿ ರೂ.೩೭,೦೦೦/- ಪಾವತಿಯಾಗುತ್ತದೆ. ಅಲ್ಲದೇ ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ಕೂಲಿ ದರವನ್ನು ಏಪ್ರಿಲ್ ೧ ರಿಂದ ರೂ. ೩೪೯ ರಿಂದ ರೂ.೩೭೦ಕ್ಕೆ ಹೆಚ್ಚಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ ಎಂದು ಅವರು ಹೇಳಿದರು.
ಅಭಿಯಾನದ ಉದ್ದೇಶ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಕುಶಲ ಕಾರ್ಮಿಕರಿಗೆ ನಿರಂತರವಾಗಿ ಮೂರು ತಿಂಗಳವರೆಗೆ ಉದ್ಯೋಗ ಒದಗಿಸುವುದು. ಕೂಲಿ ಆಧಾರಿತ ಕಾಮಗಾರಿಗಳನ್ನು ಸೃಜಿಸಿ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವುದು. ವಿಶೇಷ ಚೇತನತರು, ಮಹಿಳೆಯರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲ ವರ್ಗಗಳಿಗೆ ಆದ್ಯತೆಯ ಮೇರೆಗೆ ಉದ್ಯೋಗ ಚೀಟಿ ಮತ್ತು ಕೆಲಸ ಒದಗಿಸುವುದು, ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣವನ್ನು ತಗ್ಗಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರನ್ನೊಳಗೊಂಡು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಶೇ.೬೦ ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಎಲ್ಲ ಯೋಜನೆಗಳ ಮಾಹಿತಿಗಾಗಿ, ಏಕೀಕೃತ ಸಹಾಯವಾಣಿ ಸಂಖ್ಯೆ: ೮೨೭೭೫೦೬೦೦೦ ಹಾಗೂ ಜಿಲ್ಲಾ ಪಂಚಾಯತಿಯ ನರೇಗಾ ಸಹಾಯವಾಣಿ ಸಂಖ್ಯೆ: +೯೧ ೯೪೮೦೮ ೩೧೬೯೯ ಗೆ ಸಂಪರ್ಕಿಸಬಹುದು ಮತ್ತು ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಜಿಪಂ ಸಿಇಓ ರಿಷಿ ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು ೨,೫೪,೯೧೨ ಕೂಲಿ ಕಾರ್ಮಿಕರಿಗೆ ಉದ್ಯೋಗ
೨೦೨೪-೨೫ ಸಾಲಿನಲ್ಲಿ ಜಿಲ್ಲೆಯಲ್ಲಿ ೧,೫೮,೧೧೯ ಕುಟುಂಬಗಳ ಪೈಕಿ ಒಟ್ಟು ೨,೫೪,೯೧೨ ಕೂಲಿ ಕಾರ್ಮಿಕರು ಮನರೇಗಾ ಯೋಜನೆಯಡಿ ಉದ್ಯೋಗ ಪಡೆದಿದ್ದಾರೆ.

