ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಎಲ್.ಟಿ- 4 ಮತ್ತು ಎಲ್.ಟಿ- 5ರ ನಿವಾಸಿಗಳ ಅಳಲಿಗೆ ಸ್ಪಂದಿಸಿದ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಾಂಡಾ ನಿವಾಸಿಗಳ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಇಟ್ಟಂಗಿಹಾಳ ಎಲ್.ಟಿ- 4 ಮತ್ತು ಎಲ್.ಟಿ- 5ರ ಬಳಿ ಬಹಳ ವರ್ಷಗಳಿಂದ ಹಲವು ಕುಟುಂಬಗಳು ಸರಕಾರಿ ಜಾಗದಲ್ಲಿ ವಾಸಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿ ಸರಕಾರಿ ಜಮೀನು ಅತೀಕ್ರಮಣ ತೆರವುಗೊಳಿಸಲು ಕ್ರಮ ಕೈಗೊಂಡಿದ್ದರು. ಇದರಿಂದ ಸಂತ್ರಸ್ತರಾದ ತಾಂಡಾಗಳ ನಿವಾಸಿಗಳು ಶಾಸಕರನ್ನು ಭೇಟಿ ಮಾಡಿ ತಮ್ಮನ್ನು ತೆರವುಗೊಳಿಸದೇ ಹಿತ ಕಾಪಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ಸಮಸ್ಯೆ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು. ಅಲ್ಲದೇ, ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ತಿಕೋಟಾ ತಹಸೀಲ್ದಾರ ಸುರೇಶ ಚವಲರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರ ಅವರೊಂದಿಗೆ ತಾಂಡಾಗಳ ನಿವಾಸಿಗಳ ಸಮ್ಮುಖದಲ್ಲಿ ಸಭೆ ನಡೆಸಿದರು.
ಈ ಸಭೆಯಲ್ಲಿ ಮಾತನಾಡಿದ ಶಾಸಕರು, ಎರಡೂ ತಾಂಡಾಗಳ ಜನರ ಹಿತ ಕಾಪಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ, ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಸಂಪರ್ಕಿಸಿದ ಶಾಸಕರು ತಾಂಡಾಗಳ ಜನರ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಆಗ ಸಚಿವರು ಕಾನೂನಿನಲ್ಲಿ ಮತ್ತು ಜಿಲ್ಲಾಧಿಕಾರಿಗಳ ಹಂತದಲ್ಲಿ ಇರುವ ಅವಕಾಶಗಳ ಅನ್ವಯ ಪರಿಶೀಲಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಂಡಾಗಳ ಮುಖಂಡರಾದ ಭೀಮು ಪೂಜಾರಿ, ಅಶೋಕ ರಾಠೋಡ, ಅನೀಲ ರಾಠೋಡ, ಮಹಾದೇವ ಪವಾರ, ಪ್ರಕಾಶ ಚವ್ಹಾಣ, ಹೀರಾಲಾಲ ಚವ್ಹಾಣ, ಮಂಜು ರಾಠೋಡ, ಶಿವಲಸಲ ಚವ್ಹಾಣ, ನೂರು ಮಾಧು ರಾಠೋಡ, ಶಂಕರ ಚವ್ಹಾಣ, ನಾನಾ ಮಹಿಳೆಯರು ಉಪಸ್ಥಿತರಿದ್ದರು.

