ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗಾಗಿ ಕೃಷ್ಣಾ ನದಿಯಿಂದ ನೀರೆತ್ತಿ ಕೊಲ್ಹಾರದಿಂದ ಮುಳವಾಡ, ಹೊನಗನಹಳ್ಳಿ, ವಿಜಯಪುರ ಮಾರ್ಗದಲ್ಲಿ ಅಳವಡಿಸಿರುವ ಪಿ.ಎಸ್.ಸಿ ಕೊಳವೆ ಮಾರ್ಗ ಪದೇ ಪದೇ ಒಡೆದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಈ ಸಮಸ್ಯೆಯನ್ನು ಸರಿಪಡಿಸಲು ಪಿ.ಎಸ್.ಸಿ ಕೊಳವೆ ಮಾರ್ಗ ಬದಲಾಯಿಸಿ, ಎಂ.ಎಸ್. ಪೈಪ್ ಅಳವಡಿಸುವ 50 ಕೋಟಿ ಮೊತ್ತದ ಕಾಮಗಾರಿಗೆ ನಿನ್ನೆಯ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
2011ರ ಜನಗಣತಿಯಂತೆ ವಿಜಯಪುರ ನಗರದ ಜನಸಂಖ್ಯೆ 3,26,360 ಇದ್ದು, ಪ್ರಸ್ತುತ ಅಂದಾಜು 4,80,000 ಇರುತ್ತದೆ. ವಿಜಯಪುರ ನಗರಕ್ಕೆ ಯೋಜನೆಗಾಗಿ ಕೃಷ್ಣಾ ನದಿ ಆಲಮಟ್ಟಿ ಹಿನ್ನಿರಿನಿಂದ 1ನೇ ಹಂತ, 2ನೇ ಹಂತ ಹಾಗೂ ಭೂತನಾಳ ಕೆರೆ ಮೂಲದಿಂದ ದಿನಂಪ್ರತಿ 83.32ದಶಲಕ್ಷ ಲೀಟರ್ ನೀರು ಪೂರೈಕೆ ಮಾಡುವ ಯೋಜನೆಗಳನ್ನು ವಿನ್ಯಾಸ ಮಾಡಲಾಗಿದೆ. ಹಾಲಿ ಅಳವಡಿಸಿರುವ ಪಿ.ಎಸ್.ಸಿ ಕೊಳವೆ ಮಾರ್ಗ ಮಧ್ಯ ಹೊನಗನಹಳ್ಳಿ-ವಿಜಯಪುರ ಕೊನೆಯ 11ಕಿ.ಮೀ ಭಾಗದಲ್ಲಿ ಕೊಳವೆ ಮಾರ್ಗವು ಪದೇ ಪದೇ ಒಡೆದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.
ಈ ಕುರಿತು 2-3 ಸಭೆಗಳನ್ನು ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ್ದು, ವಿಜಯಪುರ ನಗರಕ್ಕೆ ಯಾವುದೇ ವ್ಯತ್ಯಯ ಇಲ್ಲದೇ ಕುಡಿಯುವ ನೀರು ಪೂರೈಸಲು ಸದರಿ ಪ್ರದೇಶದಲ್ಲಿ ಪಿ.ಎಸ್.ಸಿ ಕೊಳವೆ ಮಾರ್ಗ ಬದಲಾಯಿಸಿ ಎಂ.ಎಸ್. ಪೈಪ್ ಅಳವಡಿಸುವುದು ಹಾಗೂ ಇತರೆ ಕಾಮಗಾರಿ ಕೈಗೊಳ್ಳಲು ರೂ.50 ಕೋಟಿ ಮೊತ್ತದ ಯೋಜನೆ ಕೈಗೊಳ್ಳುವುದು ಅವಶ್ಯಕವಾಗಿತ್ತು. ಈ ಯೋಜನೆಗೆ ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ಸಚಿವ ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

