ರಾಜ್ಯ ಬಿಜೆಪಿ ಬಣ ಬಡಿದಾಟಕ್ಕೆ ಕೊನೆಗೂ ಹೈಕಮಾಂಡ್ ಬ್ರೇಕ್ | ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಆದೇಶ | ಪಕ್ಷದ ಶಿಸ್ತು ಪದೇ ಪದೇ ಉಲ್ಲಂಘನೆಗೆ ಈ ಕ್ರಮ
ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೊನೆಗೂ ಹೈಕಮಾಂಡ್ ಕ್ರಮ ಕೈಗೊಂಡಿದೆ.
ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಬುಧವಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ ಕೊನೆಗೂ ಹೈಕಮಾಂಡ್ ಬ್ರೇಕ್ ಹಾಕಿದೆ.
ಪಕ್ಷದ ಕೇಂದ್ರ ಶಿಸ್ತು ಸಮಿತಿಯು 2025 ಫೆಬ್ರವರಿ 10 ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದೆ ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆಯ ಭರವಸೆಗಳನ್ನು ನೀಡಿದ್ದರೂ ಸಹ, ನೀವು ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಶಿಸ್ತು ಸಮಿತಿ ಆದೇಶದಲ್ಲಿ ತಿಳಿಸಲಾಗಿದೆ.
ನೀವು ಇಲ್ಲಿಯವರೆಗೆ ಹೊಂದಿದ್ದ ಪಕ್ಷದ ಯಾವುದೇ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಯತ್ನಾಳ ವಿರುದ್ದ ವರಿಷ್ಠರಿಗೆ ನಾನೆಂದೂ ದೂರು ನೀಡಿಲ್ಲ :ಬಿವೈವಿ
ಬೆಂಗಳೂರು: ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷ ಉಚ್ಛಾಟನೆ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಯತ್ನಾಳ್ ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ವಿಜಯೇಂದ್ರ, ಪಕ್ಷದ ಬೆಳವಣಿಗೆಯಲ್ಲಿನ ಕಹಿ ಘಟನೆಗಳನ್ನು ಉಲ್ಲೇಖಿಸಿ ಪಕ್ಷದ ವರಿಷ್ಠರಿಗೆ ನಾನು ಎಂದೂ ದೂರುಗಳನ್ನು ಹೇಳಿಕೊಂಡಿಲ್ಲ, ದಾಖಲಿಸಿಯೂ ಇಲ್ಲ. ತಂದೆ ಯಡಿಯೂರಪ್ಪನವರು ಎಲ್ಲರನ್ನೂ ಸಮಚಿತ್ತ ಭಾವದಿಂದ ನೋಡಿ, ಪಕ್ಷವನ್ನು ಕುಟುಂಬದಂತೆ ಬೆಳೆಸಿದ ಮಾದರಿಯಲ್ಲಿಯೇ ನಡೆಯಬೇಕೆಂಬ ಸಂಕಲ್ಪ ಹೊತ್ತು, ಸಂಘದ ಹಿರಿಯರು ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇನೆ ಎಂದು ಸ್ಪಷ್ಪಪಡಿಸಿದ್ದಾರೆ.
ಬಿಜೆಪಿ ಲಕ್ಷಾಂತರ ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆ ಪಡೆದಿರುವ ರಾಜಕೀಯ ಪಕ್ಷ, ಸಂಘ ಸಂಸ್ಕಾರ ಪಡೆದಿರುವ ಸಮರ್ಪಣಾ ಮನೋಭಾವದ ಕಾರ್ಯಕರ್ತರ ಬೆವರ ಪರಿಶ್ರಮದಿಂದ ಸಮೃದ್ಧ ವೃಕ್ಷದಂತೆ ಬೆಳೆದಿರುವ ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ಕಹಿ ಪ್ರಸಂಗಗಳಿಂದ ಎಂದಿಗೂ ನಾನು ಉದ್ವೇಗಗೊಳ್ಳಲಿಲ್ಲ, ಯಾರೊಂದಿಗೂ ದುಃಖ ತೋಡಿಕೊಂಡಿಲ್ಲ, ಸಮರ್ಪಣೆ-ತ್ಯಾಗದ ಪಾಠವನ್ನು ಹೇಳಿಕೊಡುವ ಸಂಸ್ಕಾರವಂತ ಸಂಘಟನೆಯ ವ್ಯವಸ್ಥೆಯಲ್ಲಿ ಬೆಳೆದು ಬಂದ ನಾನು ಸಹನೆ-ತಾಳ್ಮೆಯನ್ನು ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಆಧಾರ ಸ್ಥಂಭವೆಂದು ಪರಿಗಣಿಸಿ ಮುನ್ನಡಿದಿದ್ದೇನೆ. ಈ ನಿಟ್ಟಿನಲ್ಲಿ ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ಸಂಭ್ರಮಿಸಲಾರೆ ಬದಲಾಗಿ ಈ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ ಎಂದಿದ್ದಾರೆ.

