ರಚನೆ
– ಡಾ.ಶಶಿಕಾಂತ ಪಟ್ಟಣ
ಪುಣೆ
ಉದಯರಶ್ಮಿ ದಿನಪತ್ರಿಕೆ
ಚೆಂದುಳ್ಳ ಚೆಲುವೆಯ
ಅಂದುಳ್ಳ ಮುಖದಾಗ
ಹಾಲ ಚೆಲ್ಲುವ ಚೆಲುವ
ಮೂಡಿ ಬರುವ .
ಬೆಳ್ಳಿಯ ಬಿಂದಿಗಿ
ಹುಣ್ಣಿಮೆಯ ತಂಬಿಗಿ
ಬೆಣ್ಣಿ ತುಂಬಿದ ಮೋಡ
ಚದುರಿದವು ಮುಗಿಲಾಗ
ಪಡುವಲ ದಿಕ್ಕಿಗೆ
ಸೂರ್ಯನು ಮುಳಗ್ಯಾನ
ಹಕ್ಕಿ ಪಕ್ಷಿಗಳು
ಗೂಡೊಳಗ ಮಲಗ್ಯಾವ
ಚುಕ್ಕಿ ತಾರೆಯರೆಲ್ಲ
ತವರಿಗೆ ಹೋಗ್ಯಾರ
ಕತ್ತಲ ಕಡೆಗಣಿಸಿ
ಚೆಂದಿರನು ಬಂದಾನ
ಹಸಿರು ಭೂಸಿರಿಯು
ಸೂಸುವಾ ತಂಗಾಳಿ
ಕನಸುಗಳ ಖನಿಜ
ಬಿಚ್ಯಾವೋ ಎದೆಯಾಗ
ಬಿಳಿ ಸೀರಿ ಬಾಲೆಯರು
ಆರತಿ ಎತ್ತ್ಯಾರೋ
ಸೋಬಾನ ಹಾಡ್ಯಾರೋ
ಶರಣರ ನೆನೆಯುತ
ಚೆಂದುಳ್ಳ ಚೆಲುವೆಯ
ಅಂದುಳ್ಳ ಮುಖದಾಗ
ಹಾಲ ಚೆಲ್ಲುವ ಚೆಲುವ
ಮೂಡಿ ಬರುವ
