ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಆಗ್ರಹ | ಕೇಂದ್ರ ಜಲಶಕ್ತಿ ಇಲಾಖೆ ರಾಜ್ಯ ಖಾತೆ ಸಚಿವ ಡಾ.ರಾಜಭೂಷಣ್ ಚೌಧರಿ ಅವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಹಿಂದುಳಿದ ವರ್ಗಗಳಲ್ಲಿ ಅದರಲ್ಲೂ ಮೀನುಗಾರರಿಗೆ ಮೀಸಲಾತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ನಿರಾವರಿ ಇಲಾಖೆಗಳ ವ್ಯಾಪ್ತಿಗೆ ಬರುವ ಕೆರೆಗಳನ್ನು ಸಾಂಪ್ರದಾಯಿಕ ಮೀನುಗಾರರಿಗೆ ಗುತ್ತಿಗೆ ನೀಡುವಂತೆ ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಆಗ್ರಹಿಸಿದರು.
ಕೇಂದ್ರದ ಜಲಶಕ್ತಿ ಇಲಾಖೆಯ ರಾಜ್ಯ ಖಾತೆ ಸಚಿವ ಡಾ.ರಾಜಭೂಷಣ್ ಚೌಧರಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ತಮ್ಮ ನೇತೃತ್ವದ ನಿಯೋಗದೊಂದಿಗೆ ಭೇಟಿಯಾಗಿ ಅವರು ಮಾತನಾಡಿದರು.
ಇದೇ ವೇಳೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ಶೇಕಡಾ 75% ಮೀಸಲಾತಿಯನ್ನು ಸಾಂಪ್ರದಾಯಿಕ ಮೀನುಗಾರ ಸಮುದಾಯದವರಿಗೆ ನೀಡಬೇಕೆಂದು ಮನವಿ ಸಲ್ಲಿಸಲಾಯಿತು ಹಾಗೂ ಮೀನುಗಾರಿಕೆಯಲ್ಲಿ e procurement ಅನ್ನು ರದ್ದುಪಡಿಸಿ ನೇರವಾಗಿ ಸಾಂಪ್ರದಾಯಿಕ ಮೀನುಗಾರರಾದ ಗಂಗಾಮತಸ್ಥರು, ಬೆಸ್ತರು, ಕೊಲಿ ಕಬ್ಬಲಿಗ, ಮೊಗವೀರ ಸಮುದಾಯದ ಸಂಘಗಳಿಗೆ ಗುತ್ತಿಗೆ ಹಕ್ಕನ್ನು ನೀಡುವುದು ಮತ್ತು ಅವರುಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಹಾಗೂ ಪ್ರವರ್ಗ 1 ರಲ್ಲಿ ಇರುವ ಈ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡ 50% ಮೀಸಲಾತಿ ನೀಡುವ ಕುರಿತು ಹಾಗೂ ಮೀಸಲಾತಿಯಲ್ಲಿ ಆದಾಯಮಿತಿಯನ್ನು ರದ್ದು ಪಡಿಸಲು ಮಾನ್ಯ ಪ್ರಧಾನಮಂತ್ರಿಗಳಿಗೆ ಒತ್ತಡ ಹಾಕುವ ಕುರಿತು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮೀನುಗಾರರ ಸಂಘದ ಖಜಾಂಚಿ ಅಶೋಕ ಸಹಾನಿ, ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್, ಚತ್ತಿಸಗಡದ ರಾಜ್ಯಾಧ್ಯಕ್ಷೆ ಶ್ರೀಮತಿ ಗಾಯತ್ರಿ ಅವರು ನಿಯೋಗದಲ್ಲಿದ್ದರು.

