ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಹಂಸರಾಜ ಆಹೀರ್ ಅವರನ್ನು ಭೇಟಿಯಾಗಿ ಹಿಂದುಳಿದ ವರ್ಗಗಳಲ್ಲಿ ಅದರಲ್ಲೂ ಮೀನುಗಾರರಿಗೆ ಮೀಸಲಾತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ನೇತೃತ್ವದ ನಿಯೋಗ ಇತ್ತೀಚೆಗೆ ಮನವಿ ಸಲ್ಲಿಸಿತು.
ಮೀನುಗಾರಿಕೆಯಲ್ಲಿ ಸಾಂಪ್ರದಾಯಿಕ ಮೀನುಗಾರರಾದ ಗಂಗಾಮತಸ್ಥರು, ಬೆಸ್ತರು, ಕೊಲಿ ಕಬ್ಬಲಿಗ, ಮೊಗವೀರ ಸಮುದಾಯ ದವರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಹಾಗೂ ಪ್ರವರ್ಗ 1 ರಲ್ಲಿ ಇರುವ ಈ ಸಮುದಾಯದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಮೀಸಲಾತಿ ನೀಡುವ ಕುರಿತು ಹಾಗೂ ಮೀಸಲಾತಿಯಲ್ಲಿ ಆದಾಯಮಿತಿಯನ್ನು ರದ್ದು ಪಡಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಸುಣಗಾರ, ಖಜಾಂಚಿ ಅಶೋಕ ಸಹಾನಿ, ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್ ಅವರ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದರು.

