ಪ್ರಸ್ತಾವಿತ ಮಸೂದೆ ಅಸಂವಿಧಾನಿಕ | ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ
ಬೆಂಗಳೂರು: ಬಿಜೆಪಿ ನಾಯಕರ ನಿಯೋಗವು ಬುಧವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, “ಗ್ರೇಟರ್ ಬೆಂಗಳೂರು ಮಸೂದೆಗೆ ಅಂಕಿತ ಹಾಕಬೇಡಿ” ಎಂದು ಮನವಿ ಮಾಡಿದೆ.
ಪ್ರಸ್ತಾವಿತ ಮಸೂದೆಯು “ಅಸಂವಿಧಾನಿಕ”ವಾಗಿದ್ದು, ನಗರ ಆಡಳಿತದ ಪ್ರಜಾಪ್ರಭುತ್ವ ರಚನೆಯನ್ನು ರಕ್ಷಿಸಲು, ಬೆಂಗಳೂರಿನ ಸಾಂಸ್ಕೃತಿಕ ಗುರುತನ್ನು ಕಾಪಾಡಿಕೊಳ್ಳಲು ಮತ್ತು ದಕ್ಷ ನಗರ ಆಡಳಿತವನ್ನು ಖಚಿತಪಡಿಸಿಕೊಳ್ಳಲು ರಾಜ್ಯಪಾಲರು, ಗ್ರೇಟರ್ ಬೆಂಗಳೂರು ಮಸೂದೆ ತಿರಸ್ಕರಿಸಬೇಕು ಎಂದು ಬಿಜೆಪಿ ಕೇಳಿಕೊಂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯನ್ನು ಏಳು ಮಹಾನಗರ ಪಾಲಿಕೆಗಳಾಗಿ ವಿಭಜಿಸುವ ಗ್ರೇಟರ್ ಬೆಂಗಳೂರು ಮಸೂದೆಯನ್ನು ಇತ್ತೀಚೆಗೆ ರಾಜ್ಯ ವಿಧಾನಮಂಡಲದ ಎರಡೂ ಸದನಗಳಲ್ಲಿ ಅಂಗೀಕರಿಸಿಲಾಗಿದೆ.
ವಿಧಾನಮಂಡಲದ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರವಾಗಿದ್ದು, ಈಗ ಅದನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುತ್ತಿದೆ.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ನಿಯಮಾನುಸಾರವಿಲ್ಲದೆ ಅಂಗೀಕರಿಸಿರುವ ಗ್ರೇಟರ್ ಬೆಂಗಳೂರು ಮಸೂದೆ ಪರಿಷ್ಕರಿಸುವಂತೆ ಮನವಿ ಮಾಡಿದ್ದೇವೆ. ಬೆಂಗಳೂರನ್ನು ಒಡೆಯಬಾರದು. ಈ ವಿಚಾರವನ್ನ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ರಾಜ್ಯಪಾಲರು ಸಹ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಕೀಳು ಬುದ್ಧಿಯ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ ಎಂದು ಕಿಡಿಕಾರಿದರು
ತೆರಿಗೆದಾರರ ಮೇಲೆ ಹೊರೆಯಾಗುವ ಮತ್ತು ಬೆಂಗಳೂರಿನ ಬೆಳವಣಿಗೆಗೆ ಅಡ್ಡಿಯಾಗುವ ಅನಗತ್ಯ ಮಹಾನಗರಗಳ ಮತ್ತು ಸಮಿತಿಗಳ ರಚನೆಯನ್ನು ನಿಲ್ಲಿಸುವಂತೆ ಸರ್ಕಾರವನ್ನು ವಿನಂತಿಸುತ್ತಾ, ಆಡಳಿತ ಸುಧಾರಣೆಗಳು ಕನ್ನಡಿಗ ಗುರುತು, ಸಂಪ್ರದಾಯಗಳು ಮತ್ತು ಭಾಷಾ ಪ್ರಾತಿನಿಧ್ಯವನ್ನು ದುರ್ಬಲಗೊಳಿಸದಂತೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಆರ್ಥಿಕ ಕೇಂದ್ರೀಕರಣವನ್ನು ತಡೆಗಟ್ಟಿ ನಗರದ ಅಭಿವೃದ್ಧಿಗೆ ನ್ಯಾಯಯುತ ಮತ್ತು ಪಾರದರ್ಶಕ ನಿಧಿಯ ವಿತರಣೆಯನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದರು.

ಮಸೂದೆ ಅಂಗೀಕರಿಸಿದರೆ ನ್ಯಾಯಾಲಯದ ಮೊರೆ :ಆರ್.ಅಶೋಕ
ಬೆಂಗಳೂರು: ‘ಗ್ರೇಟರ್ ಬೆಂಗಳೂರು ವಿಧೇಯಕ’ ನಗರವನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಅಡಿಯಲ್ಲಿ ತರುವ ಗುರಿಯನ್ನು ಹೊಂದಿದ್ದು, ಬೆಂಗಳೂರು ಪಾಲಿಗೆ ಮರಣ ಶಾಸನವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದೆಯ ಮೂಲಕ ಸರ್ಕಾರವು ಬೆಂಗಳೂರು ನಾಗರಿಕ ಸಂಸ್ಥೆಯನ್ನು ಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದೆ, ಇದು ಸಂವಿಧಾನದ 74 ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ, ಇದು ಅಧಿಕಾರ ವಿಕೇಂದ್ರೀಕರಣಕ್ಕೆ ಅವಕಾಶ ನೀಡುತ್ತದೆ ಎಂದು ಆರೋಪಿಸಿದರು.
ಮಸೂದೆಯ ಪ್ರಕಾರ, ಮುಖ್ಯಮಂತ್ರಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ, ಬೆಂಗಳೂರು ಅಭಿವೃದ್ಧಿ ಸಚಿವರು ಅದರ ಉಪಾಧ್ಯಕ್ಷರಾಗಿರುತ್ತಾರೆ ಮತ್ತು ನಗರದ ಶಾಸಕರು ಅದರ ಸದಸ್ಯರಾಗಿರುತ್ತಾರೆ. ಇದು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವ 74ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ. ಒಂದು ವೇಳೆ ಸರ್ಕಾರ ಈ ಮಸೂದೆಯನ್ನು ಅಂಗೀಕರಿಸಿದರೆ, ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.