ಉದಯರಶ್ಮಿ ದಿನಪತ್ರಿಕೆ
ಸಿಂದಗಿ:ಏ.೦೪ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ನ್ನು ನಕಲು ಮುಕ್ತ ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ತಿಳಸಿದ್ದಾರೆ.
ಸಿಂದಗಿ, ಆಲಮೇಲ, ದೇ.ಹಿಪ್ಪರಗಿ ಹಾಗೂ ತಾಳಿಕೋಟಿ ತಾಲೂಕು ಸೇರಿದಂತೆ ಒಟ್ಟು ೨೫ ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಬಾಲಕರು ೪೦೯೮ ಹಾಗೂ ೩೬೪೯ ಬಾಲಕಿಯರು ಸೇರಿ ೭೭೪೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯು ಸಿಸಿಟಿವಿ/ವೆಬ್ ಕಾಸ್ಟಿಂಗ್ ಅಡಿಯಲ್ಲಿ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದ್ದು, ತಹಶೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ೮ ತ್ರಿಸದಸ್ಯ ತಾಲೂಕು ಮಟ್ಟದ ಸಂಚಾರಿ ಜಾಗೃತ ದಳದ ತಂಡಗಳನ್ನು ರಚಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ೨೫ಸ್ಥಾನಿಕ ಜಾಗೃತ ದಳ ಸದಸ್ಯರನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಮದ್ಯಾಹ್ನ ಬಿಸಿಊಟ ಸೇರಿ ಇತರ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು. ಮತ್ತು ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಮೊಬೈಲ್ ವಶಪಡಿಸಿಕೊಳ್ಳಲು ಪ್ರತಿ ಕೇಂದ್ರಕ್ಕೆ ಒಬ್ಬರಂತೆ ೨೫ ಮೊಬೈಲ್ ಸ್ವಾಧಿನಾಧಿಕಾರಿಗಳನ್ನು ನೇಮಿಸಲಾಗಿದೆ. ಕೊಠಡಿ ಮೇಲ್ವಿಚಾರಕರಾಗಿ ನೇಮಕಗೊಂಡ ಶಿಕ್ಷಕರು ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ವಿದ್ಯಾರ್ಥಿಗಳನ್ನು ಭೌತಿಕ ತಪಾಸಣೆ ಮಾಡಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಔಷಧಿ ಕಿಟ್ಟಗಳೊಂದಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಅರೋಗ್ಯ ಸಿಬ್ಬಂದಿ ಹಾಗೂ ಪರೀಕ್ಷಾ ಅವ್ಯವಹಾರ ತಡೆಗಟ್ಟಲು ಅಗತ್ಯ ಪೊಲೀಸ್ ಬಂದೋಬಸ್ತ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.