ಸಿಂದಗಿಯ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಂಸ್ಕೃತಿಕ ಸಿರಿ ಉದ್ಘಾಟನೆ
ಉದಯರಶ್ಮಿ ದಿನಾಚರಣೆ
ಸಿಂದಗಿ: ತಾಯಿ, ಅಕ್ಕ, ತಂಗಿ ಹೀಗೆ ಹಲವು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಆಕೆಯ ತ್ಯಾಗ ಮತ್ತು ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾದುದು ಎಂದು ಸಾರಂಗಮಠದ ನಿಯೋಜಿತ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಂಸ್ಕೃತಿಕ ಸಿರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಮಹಿಳೆಯರು ಸ್ವಾವಲಂಭಿ ಮತ್ತು ಸ್ವಾಭಿಮಾನಿ ಬದುಕು ಸಾಗಿಸಬೇಕಾದರೆ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ದೊಡ್ಡದು. ಎಲ್ಲಾ ಸ್ತರಗಳಲ್ಲೂ ಕೆಲಸ ಮಾಡುತ್ತಿರುವ ಮಹಿಳೆ ಅಬಲೆಯಾಗಿ ಉಳಿದಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ನಾವು ಪ್ರೇರಣೆಯಾಗಿಟ್ಟುಕೊಂಡು ನಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಡಿ.ಪಾಟೀಲ ಪಪೂ ಕಾಲೇಜಿನ ಉಪನ್ಯಾಸಕಿ ವಿಜಯಲಕ್ಷ್ಮಿ ಹಿರೇಮಠ ಮಾತನಾಡಿ, ದೇಶದ ಅತ್ಯನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನದಿಂದ ಹಿಡಿದು ಎಲ್ಲಾ ಹುದ್ದೆಗಳನ್ನು ಮಹಿಳೆ ಅಲಂಕರಿಸುವ ಮೂಲಕ ತನ್ನದೇ ಆದ ಸ್ಥಾನಮಾನ ಗಳಿಸಿದ್ದಾಳೆ. ಶ್ರೀಮಠವು ಮಹಿಳೆಯರಿಗಾಗಿಯೇ ಪ್ರತ್ಯೇಕ ಮಹಿಳಾ ಕಾಲೇಜನ್ನು ಪ್ರಾರಂಭಿಸಿ ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಎಂದರು.
ಈ ವೇಳೆ ಅತಿಥಿ ಸ್ಥಾನವನ್ನು ಅಲಂಕರಿಸಿದ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ, ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಎಸ್.ಎಂ.ಪೂಜಾರಿ ಮಾತನಾಡಿದರು.
ಸಾನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಸ್ಟಾರ್‌ನರ್ ಯಾನದ ಮೂಲಕ ಭೂಮಿಗೆ ಸುರಕ್ಷಿತವಾಗಿ ಮರಳಿದ್ದು, ತಮ್ಮ ಬಾಹ್ಯಾಕಾಶ ಸಾಧನೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ತಾಂತ್ರಿಕ ಸವಾಲುಗಳ ನಡುವೆಯೂ ಭೂಮಿಗೆ ಮರಳಿದ ಅವರ ಧೈರ್ಯ ಮತ್ತು ಬದ್ಧತೆ ಶ್ಲಾಘನೀಯ. ಅವರ ಸಾಧನೆ ತಮಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾರಂಗಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ನೇಮಕಗೊಂಡ ನಿಯೋಜಿತ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರಿಗೆ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ ಮೆರುಗು ತಂದಿತು.
ಕಾರ್ಯಕ್ರಮದಲ್ಲಿ ಮಹಿಳಾ ಪಪೂ ಕಾಲೇಜು ಪ್ರಾಚಾರ್ಯ ಎಮ್.ಎಸ್.ಹೈಯಾಳಕರ, ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ಅನೀಲಕುಮಾರ ರಜಪೂತ, ಶಿವರಾಜ ಕುಂದಗೊಳ, ಭಾಗ್ಯಶ್ರೀ ನಂದಿಮಠ, ಎಮ್.ಕೆ.ಬಿರಾದಾರ, ಎಸ್.ಸಿ.ದುದ್ದಗಿ, ಜಿ.ವಿ.ಪಾಟೀಲ್, ಹೇಮಾ ಹಿರೇಮಠ, ನೀಲಮ್ಮ ಬಿರಾದಾರ, ಮಂಗಳಾ ಈಳಗೇರ, ಡಿ.ಎಂ.ಪಾಟೀಲ, ಶಂಕರ ಕುಂಬಾರ, ಮಮತಾ ಹರನಾಳ, ವಿಜಯಲಕ್ಷ್ಮಿ ಭಜಂತ್ರಿ ಸೇರಿದಂತೆ ಮಾಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿನಿ ಪೂಜಾ ಸಾರಂಗಮಠ ಹಾಗೂ ನಾಗಮ್ಮ ದೊಡಮನಿ ನಿರೂಪಿಸಿದರು. ಐಶ್ವರ್ಯ ಬಿರಾದಾರ ಪ್ರಾರ್ಥಿಸಿದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಯು.ಸಿ.ಪೂಜೇರಿ ಸ್ವಾಗತಿಸಿದರು. ಕಾರ್ಯದರ್ಶಿ ಅಕ್ಷತಾ ಕತ್ನಳ್ಳಿ ವಂದಿಸಿದರು.