ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ಚಡಚಣ: ಮಹಿಳೆಯರಿಗೆ ಬಸ್ ಪ್ರಯಾಣ ದರವನ್ನು ಉಚಿತ ಮಾಡಿದ ‘ಶಕ್ತಿ’ ಯೋಜನೆಯಿಂದ ಬಸ್ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ದೊಡ್ಡ ಮೊತ್ತದ ಲಾಭವನ್ನೂ ಸರ್ಕಾರ ಗಳಿಸಿದೆ. ಹಾಗಿದ್ದರೂ ಬಸ್ ಪ್ರಯಾಣದಲ್ಲಿ ಮಾತ್ರ ಏರಿಕೆಯಾಗಿಲ್ಲ. ಇದು ಯೋಜನೆಯ ಶಕ್ತಿಯನ್ನೇ ಕುಂದಿಸುತ್ತಿದೆ.
ದೇವಾಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಕನಸಿಗೆ ‘ಶಕ್ತಿ’ ಬಂದಿದೆ. ಕುಟುಂಬ ಸಮೇತ ಜನರು ಪ್ರಯಾಣ ಮಾಡುತ್ತಿದ್ದಾರೆ. ಜೊತೆಗೆ, ಮದುವೆ-ಮುಂಜಿ ಸೇರಿದಂತೆ ಕೌಟುಂಬಿಕ ಕಾರ್ಯಕ್ರಮಗಳಿಗೆ ಜನರು ಬಸ್ ಮೂಲಕವೇ ಪ್ರಯಾಣ ಮಾಡುತ್ತಿದ್ದಾರೆ.
ಒಂದೆರಡು ಕಿಲೋಮೀಟರ್ ದೂರಕ್ಕೆ ನಡೆದುಕೊಂಡೇ ಸಾಗುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿ ಮಹಿಳೆಯರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಗಾರ್ಮೆಂಟ್ ಸಹಿತ ವಿವಿಧೆಡೆ ಕೆಲಸ ಮಾಡುವ ಮಹಿಳೆಯರು ದ್ವಿಚಕ್ರ ವಾಹನಗಳನ್ನು ಬಿಟ್ಟು ಬಸ್‌ಗಳಲ್ಲಿ ಸಂಚರಿಸುವ ಮೂಲಕ ಇಂಧನಕ್ಕೆ ಆಗುತ್ತಿದ್ದ ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ.
ಹೆಚ್ಚಿದ ಪ್ರಯಾಣಿಕರ ಸಂಖ್ಯೆಗೆ ತಕ್ಕಷ್ಟು ಬಸ್‌ಗಳನ್ನು ಓಡಿಸದೇ ಇರುವುದರಿಂದ ನಿತ್ಯ ಜಿಲ್ಲಾ, ತಾಲ್ಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ತೆರಳುವ ಸರ್ಕಾರಿ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಸೀಟು ಸಿಗದೇ ಸಂಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಮಾಸಿಕ ಬಸ್ ಪಾಸ್ ಹೊಂದಿದವರಿಗೂ ಸೀಟುಗಳು ಸಿಗುತ್ತಿಲ್ಲ.
ವಿಶೇಷವಾಗಿ ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು, ವಿಕಲಚೇತನರು, ವೃದ್ಧ-ವೃದ್ಧೆಯರು ತೊಂದರೆ ಅನುಭವಿಸುತ್ತಿದ್ದಾರೆ. ಬಸ್‌ಗಾಗಿ ಕಾದು ಸಮಯ ವ್ಯರ್ಥ ಮಾಡುವುದಕ್ಕಿಂತ ಹಣ ಕೊಟ್ಟು ಹೋಗಲು ಸಿದ್ಧವೆಂದರೂ ಖಾಸಗಿ ಬಸ್ ಹತ್ತೋಣವೆಂದರೆ ಅವು ಗ್ರಾಮೀಣ ಪ್ರದೇಶಗಳಿಗೆ ಹೋಗಲ್ಲ ಎನ್ನುವುದು ಪ್ರಯಾಣಿಕರ ದೂರು.