ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾರಾಯಣಪೂರ ಜಲಾಶಯದ ಕೃಷ್ಣಾ ನದಿಯಿಂದ ತೆಲಂಗಾಣಕ್ಕೆ ೧.೨ ಟಿಎಂಸಿ ನೀರು ಬಿಡುತ್ತೇವೆಂದು ಹೇಳಿ ಈಗ ೧೦ ಟಿಎಂಸಿ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಂಸದ ರಮೇಶ ಜಿಗಜಿಣಗಿ ಖಂಡಿಸಿದ್ದಾರೆ.
ಈಗಿನ ಬಿರು ಬೇಸಿಗೆಯ ಸಂದರ್ಭದಲ್ಲಿ ವಿಜಯಪುರ ನಗರ ಸೇರಿದಂತೆ ಜಿಲ್ಲಾದ್ಯಂತ ಕುಡಿಯುವ ನೀರಿನ ಕೊರತೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸಿ ಎಂದು ನಾವೇ ಹೇಳಿದರೆ ಬೇಸಿಗೆಯ ಸಂದರ್ಭವಿದೆ ಜಿಲ್ಲೆಯ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರದ ಈಗ ನೆರೆಯ ತೆಲಂಗಾಣಕ್ಕೆ ೧೦ ಟಿಎಂಸಿ ನೀರು ಬಿಟ್ಟಿರುವ ಔಚಿತ್ಯ ಎನಿತ್ತು ಎಂದು ಎಂದಿದ್ದಾರೆ.
ಈಗಲೇ ವಿಜಯಪುರ ನಗರಕ್ಕೆ ೪-೮ ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಮುಂದಿನ ೭೫ ದಿನಗಳ ಕಾಲ ಬೇಸಿಗೆ ಕಾಲವಾಗಿರುವದರಿಂದ ಜನರಿಗೆ ಉತ್ತರ ಏನು ಹೇಳುತ್ತಿರಿ. ಮುಂದಿನ ದಿನಗಳಲ್ಲಿ ಏನಾದರೂ ಕುಡಿಯುವ ನೀರಿನ ಸಮಸ್ಯೆಯಾದರೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.