ತಿಕೋಟಾ: ಬಬಲೇಶ್ವರ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಪರ ಮತಯಾಚನೆ ಕೈಗೊಂಡರು.
ತಾಲ್ಲೂಕಿನ ಬಿಜ್ಜರಗಿ, ಘೋಣಸಗಿ, ಬಾಬಾನಗರ, ಕಳ್ಳಕವಟಗಿ, ಹೊನವಾಡ ಗ್ರಾಮಗಳಲ್ಲಿ ನೂರಾರು ಬೈಕ್ ಗಳ ಮೂಲಕ ಯುವಕರು ಹಾಗೂ ಕಾರ್ಯಕರ್ತರು ಸೋಮವಾರ ಮನೆ ಮನೆಗೆ ಹಾಗೂ ತೋಟದ ವಸ್ತಿಗಳಿಗೆ ತೆರಳಿ ಮತ ಯಾಚಿಸಿದರು.
ಸತತ ಹದಿನೇಳು ವರ್ಷಗಳಿಂದ ಮೂರು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಅಧಿಕಾರದ ಅವಕಾಶ ಇಲ್ಲದಿದ್ದರೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಜನ ಸೇವೆ ಮಾಡಿದ್ದಾರೆ. ಒಂದು ಬಾರಿ ಅಧಿಕಾರ ನೀಡಿದರೆ ಮತಕ್ಷೇತ್ರದ ಅಭಿವೃದ್ಧಿ ಮಾಡುವ ಕನಸನ್ನು ಹೊಂದಿದ್ದಾರೆ ಎಂದು ಕಾರ್ಯಕರ್ತ ಕೇದಾರಿ ಗಿಡ್ನವರ ಮತದಾರರಿಗೆ ಮತ ಕೇಳುತ್ತಾ ಮಾತನಾಡಿದರು.
ಪಕ್ಷದ ಹಿರಿಯ ಪೀರಗೊಂಡ ಗದ್ಯಾಳ ಮಾತನಾಡಿ ಮತಕ್ಷೇತ್ರದಲ್ಲಿ ಬಿಜೆಪಿಯ ಅಲೆ ಜೋರಾಗಿದೆ. ಬಿಜೆಪಿ ಮಾಡಿದಂತಹ ಅಭಿವೃದ್ಧಿ ಕಾರ್ಯ ಹಾಗೂ ನಮ್ಮ ಅಭ್ಯರ್ಥಿಯ ಮೂರು ಬಾರಿ ಸತತ ಸೋಲಿನ ಅನುಕಂಪದಿಂದ ಮತದಾರರು ಬಿಜೆಪಿ ಗೆಲ್ಲಿಸುವ ಸಂಕಲ್ಪ ತೊರಿದ್ದಾರೆ. ಈ ಬಾರಿ ಬಬಲೇಶ್ವರ ಮತಕ್ಷೇತ್ರದಲ್ಲಿ ಕಮಲ ಅರಳುವದು ಶತಸಿದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ ಗಿಡ್ನವರ, ಸದಾಶಿವ ಗಿಡ್ನವರ, ರಮೇಶ ಗದ್ಯಾಳ, ನಂದಕುಮಾರ ಸೂನಂದಕರ, ಬಾಪುರಾಯ ಅತಾಲಟ್ಟಿ ಹಾಗೂ ನೂರಾರು ಕಾರ್ಯಕರ್ತರು ಇದ್ದರು.