ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದಾದ್ಯಂತ ಹೋಳಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕಾಮದಹನ ಹಾಗೂ ಬಣ್ಣದಾಟ ಜರುಗಿದವು.
ಹೋಳಿ ಹಬ್ಬದ ಅಂಗವಾಗಿ ಗುರುವಾರ ಸಾಂಪ್ರದಾಯಿಕ ಕಾಮದಾಹನದ ಅಂಗವಾಗಿ ವಿವಿಧ ಬಡಾವಣೆ, ಓಣಿಗಳಲ್ಲಿ ಕಾಮದಹನದ ಸ್ಥಳವನ್ನು ರಂಗೋಲಿಯ ಮೂಲಕ ಚಿತ್ತಾರ ಮೂಡಿಸಿ ಅಲಂಕರಣಗೊಳಿಸಲಾಗಿತ್ತು. ರಾತ್ರಿಯಾಗುತ್ತಿದ್ದಂತೆಯೇ ಪೂಜೆ ಸಲ್ಲಿಸಿ ನಂತರ ವಿವಿಧ ಮನೆಗಳಿಂದ ಬಂದ ನೈವಿಧ್ಯವನ್ನು ಕಟ್ಟಿಗೆಯ ರಾಶಿಯಡಿ ಇಟ್ಟು ನಂತರ ದಹನ ಮಾಡಲಾಯಿತು.
ಶುಕ್ರವಾರ ಬೆಳಿಗ್ಗೆ ಮಹಿಳೆಯರು ಕಾಮದಹನದ ಬೆಂಕಿಯನ್ನು ಮನೆಮನೆಗೆ ಕೊಂಡೊಯ್ದು ಸಂಪ್ರದಾಯ ಪಾಲನೆ ಮಾಡಿದರು. ಇನ್ನೂ ಕೆಲವರು ಕಡಲೆ ಹಾಗೂ ಗೆಣಸುಗಳನ್ನು ತಂದು ಕಾಮದಹನದ ಬೆಂಕಿಯಲ್ಲಿ ಸುಟ್ಟು ಮಕ್ಕಳಿಗೆ ಹಂಚಿದರು.
ಮಕ್ಕಳು ಶುಕ್ರವಾರ ಬೆಳಗಾಗುತ್ತಿದ್ದಂತೆಯೇ ಪಿಚಕಾರಿ, ಬಾಟಲಿಗಳ ಮೂಲಕ ಬಣ್ಣದಾಟ ಆರಂಭಿಸಿದರು. ಮನೆ ಹಾಗೂ ಓಣಿಗಳಲ್ಲಿ ಹಲಿಗೆ ಬಡಿಯುತ್ತಾ ಬಣ್ಣದ ರಂಗಿನೊಂದಿಗೆ ಓಡಾಡುತ್ತಾ, ಓರಗೆಯವರಿಗೆ ಬಣ್ಣ ಬಳಿಯುವ ದೃಶ್ಯಗಳು ಕಂಡು ಬಂದವು. ಯುವಕರು ಮಾತ್ರ ತಮ್ಮ ಆಪ್ತರು ಹಾಗೂ ಸ್ನೇಹಿತರಿಗೆ ಬಣ್ಣ ಬಳಿದು ಸಂಭ್ರಮಿಸುವುದರ ಜೊತೆಗೆ ಮೋಬೈಲ್‌ಗಳಲ್ಲಿ ಸೆಲ್ಪಿ ಹಾಗೂ ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದರು. ಕೆಲವು ಕಡೆ ಯುವಕರು ಬೈಕ್ ಗಳ ಮೂಲಕ ಗೆಳೆಯರೊಂದಿಗೆ ಆಪ್ತರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ನಂತರ ಮಧ್ಯಾನ್ಹದ ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ಮನೆ ಸೇರಿದರು.
ಪಟ್ಟಣದಾದ್ಯಂತ ಮೊದಲೆಲ್ಲಾ ಸಾಯಂಕಾಲವರೆಗೆ ಜರುಗುತ್ತಿದ್ದ ಬಣ್ಣದಾಟ ಈ ಬಾರಿ ಮಧ್ಯಾನ್ಹವೇ ಕೊನೆಗೊಂಡಿತು.

