ಹಾವಿನಾಳ–ಹತ್ತಳ್ಳಿ–ಲೋಣಿ ಬಿ.ಕೆ. ಕೂಡು ರಸ್ತೆ ಅಭಿವೃದ್ಧಿಯ ರೂ.5 ಕೋಟಿ ಕಾಮಗಾರಿಗೆ ಶಾಸಕ ವಿಠ್ಠಲ ಕಟಕಧೋಂಡ ಭೂಮಿಪೂಜೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಹಾವಿನಾಳ, ಹತ್ತಳ್ಳಿ ಹಾಗೂ ಲೋಣಿ ಬಿ.ಕೆ. ಗ್ರಾಮಗಳ ಮೂಲಕ ಹಾದುಹೋಗುವ ರಾ.ಹೆ.-41ಕ್ಕೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆಯ ಸುಧಾರಣಾ ಕಾಮಗಾರಿಗೆ ₹5 ಕೋಟಿ ಅನುದಾನ ಮಂಜೂರಾಗಿದ್ದು, ಶುಕ್ರವಾರ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಧೋ. ಕಟಕಧೋಂಡ ಅವರು ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ಹಾವಿನಾಳ–ಹತ್ತಳ್ಳಿ–ಲೋಣಿ ಬಿ.ಕೆ. ಗ್ರಾಮಗಳಿಂದ ರಾ.ಹೆ.-41ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಿ.ಮೀ. 2.98ರಿಂದ 9.00ರವರೆಗಿನ ರಸ್ತೆ ಸುಧಾರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಅಂದಾಜು ₹500 ಲಕ್ಷ (₹5 ಕೋಟಿ) ವೆಚ್ಚ ನಿಗದಿಪಡಿಸಲಾಗಿದೆ.
ಈ ವೇಳೆ ಮಾತನಾಡಿದ ಶಾಸಕ ವಿಠ್ಠಲ ಕಟಕಧೋಂಡ, ಕಾಮಗಾರಿಯನ್ನು ಶೀಘ್ರ ಆರಂಭಿಸಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ನಿಗದಿತ ಮಾನದಂಡಗಳಂತೆ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಉತ್ತಮ ರಸ್ತೆ ಸೌಲಭ್ಯ ಕಲ್ಪಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಕಾಮಗಾರಿಯ ಗುತ್ತಿಗೆಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಎಚ್.ಆರ್. ಚಿಂಚಲಿ ಅವರಿಗೆ ವಹಿಸಲಾಗಿದೆ. ರಸ್ತೆ ಸುಧಾರಣೆಯಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಸಂಚಾರಕ್ಕೆ ಅನುಕೂಲವಾಗುವುದರ ಜತೆಗೆ ರೈತರು ಕೃಷಿ ಉತ್ಪನ್ನಗಳನ್ನು ಸಾಗಿಸಲು ಹಾಗೂ ಸಾರ್ವಜನಿಕರ ದೈನಂದಿನ ಪ್ರಯಾಣಕ್ಕೆ ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಚಡಚಣ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಇಲಾಹಿಸಾಬ ನದಾಫ, ಮುಖಂಡ ದ್ಯಾವಪ್ಪಗೌಡ ಪಾಟೀಲ ಸೇರಿದಂತೆ ಚಡಚಣ, ಹಾವಿನಾಳ, ಹತ್ತಳ್ಳಿ ಹಾಗೂ ಲೋಣಿ ಬಿ.ಕೆ. ಗ್ರಾಮಗಳ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು

