ಉದಯ ರಶ್ಮಿ ದಿನಪತ್ರಿಕೆ
ಅಥಣಿ: ರಾಜಕೀಯ, ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುವ ಮೂಲಕ ಜನಮನ್ನಣೆ ಗಳಿಸಿರುವ ಅಥಣಿಯ ಉದ್ಯಮಿ ಹಾಗೂ ಸಮಾಜಸೇವಕ ರಾವಸಾಬ ನಿ. ಐಹೊಳೆ ಅವರಿಗೆ ರಾಜ್ಯಮಟ್ಟದ ಮಹತ್ವದ ಜವಾಬ್ದಾರಿ ಒಲಿದು ಬಂದಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿರುವ ಅವರನ್ನು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾವಸಾಬ ಐಹೊಳೆ ಅವರ ಆಯ್ಕೆಯು ಅಥಣಿ ಕ್ಷೇತ್ರದಲ್ಲಿ ಸಂತಸ ಮತ್ತು ಹರ್ಷದ ವಾತಾವರಣಕ್ಕೆ ಕಾರಣವಾಗಿದೆ. ಅಥಣಿ ಭಾಗದ ಯುವ ನಾಯಕ ರಾವಸಾಬ ಐಹೊಳೆ ಅವರಿಗೆ ರಾಜ್ಯಮಟ್ಟದ ಜವಾಬ್ದಾರಿ ದೊರೆತಿರುವುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

