ಕೊಲ್ಹಾರ : ನನ್ನ ಅಧಿಕಾರವಧಿಯಲ್ಲಿ ಮತಕ್ಷೇತ್ರದ ಕೊಲ್ಹಾರ, ನಿಡಗುಂದಿ ಸೇರಿ ಜಿಲ್ಲೆಗೆ ಒಟ್ಟು 8 ನೂತನ ತಾಲ್ಲೂಕುಗಳನ್ನು ತಂದಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದ ಮತಕ್ಷೇತ್ರದ ಕೊಲ್ಹಾರ ಮತ್ತು ನಿಡಗುಂದಿ ನೂತನ ತಾಲ್ಲೂಕುಗಳು ಮತ್ತು ಪಟ್ಟಣಗಳ ಅಭಿವೃದ್ಧಿಗೊಳಿಸುವ ಜೊತೆಗೆ ಎಲ್ಲಾ ಪುನರ್ವಸತಿ ಕೇಂದ್ರಗಳ ಮರು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಗುರಿ ಹೊಂದಿದ್ದೇನೆ ಎಂದು ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಭರವಸೆ ನೀಡಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆ ಸೋಮವಾರ ಬೆಳ್ಳುಬ್ಬಿಯವರು ತಮ್ಮ ಅಪಾರ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ತೆರಳಿ ಮನೆಮನೆ ಪ್ರಚಾರ ಕೈಗೊಂಡು ಮಾತನಾಡಿದರು. ನನ್ನ ಜೀವನವೇ ಪುನರ್ವಸತಿ ಸಂತ್ರಸ್ತರು,ರೈತರ ಪರ ಹೋರಾಟದಲ್ಲೇ ಕಳೆದಿದ್ದೇನೆ. ಈ ಚುನಾವಣೆಯಲ್ಲಿ ನನಗೆ ಸಿಕ್ಕಷ್ಟು ಬೆಂಬಲ, ಜನರ ಅಭಿಮಾನ ಹಿಂದೆಂದೂ ಕಂಡಿಲ್ಲ. ಮತಕ್ಷೇತ್ರದ ಎಲ್ಲಾ ಬಡವರಿಗೂ ಸೂರು ಕಲ್ಪಿಸಲು ಮತಕ್ಷೇತ್ರಕ್ಕೆ ಸುಮಾರು 25-40 ಸಾವಿರ ಆಶ್ರಯ ಯೋಜನೆ ಮನೆಗಳನ್ನು ತರುವ ಗುರಿ ಇದೆ. ಎಲ್ಲಾ ಗ್ರಾಮಗಳ ಅಭಿವೃದ್ಧಿ, ಮೂಲಸೌಕರ್ಯಗಳನ್ನು ಕಲ್ಪಿಸಿ, ನೂತನ ತಾಲ್ಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ಜೊತೆಗೆ ಎಲ್ಲಾ ಸರ್ಕಾರಿ ಕಚೇರಿಗಳ ಸ್ಥಾಪನೆಯಾಗಬೇಕಿದೆ. ಆರಿಸಿ ಬಂದರೆ ಎಲ್ಲಾ ಕೆಲಸಗಳನ್ನು ಮಾಡಿಯೇ ತೀರುತ್ತೇನೆ ಎಂದರು.
ನನ್ನ ಅವಧಿಯಲ್ಲಿ ಅನುದಾನ ಬಿಡುಗಡೆಗೊಳಿಸಿದ ಯುಜಿಡಿ ಕಾಮಗಾರಿ, ರಸ್ತೆ ಅಭಿವೃದ್ಧಿ ಕೆಲಸಗಳು ಕಳೆಪೆಮಟ್ಟದಾಗಿದ್ದು, ಇನ್ನೂ ಪೂರ್ಣಗೊಳಿಸಿಲ್ಲ. ವ್ಯಾಪಾರಸ್ಥರು ಹೇಳುವಂತೆ ಕೊಲ್ಹಾರದಲ್ಲಿ ವಾಣಿಜ್ಯ ಮಳಿಗೆಗಳಿಗಾಗಿ ವ್ಯಾಪಾರಸ್ಥರು 50 ಲಕ್ಷ ಸಂಗ್ರಹಿಸಿ ಶಾಸಕ ಶಿವಾನಂದ ಪಾಟೀಲರಿಗೆ ಕೊಟ್ಟು ಡಿಸಿಸಿ ಬ್ಯಾಂಕ್ ನಲ್ಲಿ ಇರಿಸಿದ್ದರು. ಸುಮಾರು ವರ್ಷಗಳಾದರೂ ಅಂಗಡಿಯೂ ಸಿಗಲ್ಲಿಲ್ಲ, ದುಡ್ಡು ಸಿಗಲಿಲ್ಲ. ಇತ್ತಿಚೇಗೆ ಎಲ್ಲರೂ ಹೋಗಿ ಹಣ ವಾಪಾಸ್ಸು ತಂದಿದ್ದಾರೆ. ಬಡವರು, ರೈತರನ್ನು ವಂಚಿಸಿ ಶಿವಾನಂದ ಪಾಟೀಲರು ವಿಜಯಪುರ ಡಿಸಿಸಿ ಬ್ಯಾಂಕ್ ನ್ನು ತಮ್ಮ ಅನುಕೂಲಕ್ಕೆ ಬೇಕಾದಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿಸಿಸಿ ರೈತರ ಬ್ಯಾಂಕ್ , ಅದು ಶಾಸಕ ಶಿವಾನಂದ ಪಾಟೀಲರ ಸ್ವಂತ ಬ್ಯಾಂಕ್ ಅಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಂತಹ ದಬ್ಬಾಳಿಕೆ ಹೆಚ್ಚು ದಿನ ನಡೆಯುವುದಿಲ್ಲ. ಈ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದ ಜನತೆ ಶಿವಾನಂದ ಪಾಟೀಲರಿಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ವೇಳೆ ಬಿಜೆಪಿ ಮುಖಂಡರಾದ ಸಿ.ಎಂ ಗಣಕುಮಾರ, ಸಂಗಪ್ಪ ಬಾಟಿ, ಇಕ್ಬಾಲ್ ನದಾಫ್ ಮಾತನಾಡಿದರು. ಪಟ್ಟಣದ ಹಲವಾರು ಹಿರಿಯರು, ಪ್ರಮುಖರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.