ವಿಜಯಪುರ: ಎಂ.ಬಿ.ಪಾಟೀಲರು ಪ್ರಚಂಡ ಬಹುಮತದಿಂದ ಆಯ್ಕೆಯಾಗಲಿ ಎಂದು ಪ್ರಾರ್ಥಿಸಿ ನಾಲ್ಕು ಜನ ಯುವಕರು ಸುಮಾರು 55 ಕಿ.ಮೀ ದೀರ್ಘದಂಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದಾರೆ.
ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದ ಮಳೆಮಲ್ಲೇಶ್ವರ ದೇವಸ್ಥಾನದಿಂದ ದೀರ್ಘದಂಡ ನಮಸ್ಕಾರ ಆರಂಭಿಸಿದ ಯುವಕರಾದ ದಶರಥ ಮಹಾದೇವ ದೊಡಮನಿ, ಗೋಪಾಲ ಶಂಕ್ರಪ್ಪ ದೊಡಮನಿ, ಸಂತೋಷ ಲಕ್ಷ್ಮಣ ದೊಡಮನಿ ಮತ್ತು ರವಿ ಅಡಿವೆಪ್ಪ ಕವಟಗಿ ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ರಾತ್ರಿ 10 ಗಂಟೆಗೆ ಬೆಳ್ಳುಬ್ಬಿಯಿಂದ ಹೊರಟ ಈ ಯುವಕರು ಮರುದಿನ ಬೆಳಿಗ್ಗೆ 11 ಗಂಟೆಗೆ ವಿಜಯಪುರ ತಲುಪಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಉಪಸ್ಥಿತರಿದ್ದ ಯುವಕರ ಸಂಬಂಧಿಕರು ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವಕರು, ಎಂ. ಬಿ. ಪಾಟೀಲರು ನೀರಾವರಿ ಮೂಲಕ ನಮ್ಮ ಭಾಗದಲ್ಲಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದ್ದಾರೆ. ಇಂಥವರ ಸೇವೆ ನಮಗೆ ಅಗತ್ಯವಾಗಿದೆ. ಜಲನಾಯಕರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಲಿ ಎಂದು ಪ್ರಾರ್ಥಿಸಿ ದೀರ್ಘದಂಡ ನಮಸ್ಕಾರ ಹಾಕಿರುವುದಾಗಿ ತಿಳಿಸಿದರು.
ಈ ಬಾರಿ ಚುನಾವಣೆ ಬಳಿಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಎಂ. ಬಿ. ಪಾಟೀಲರು ಉನ್ನತ ಸ್ಥಾನಕ್ಕೇರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.