ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂತರರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಆಚರಿಸುವ, ಗೌರವಿಸುವ , ಮುಕ್ತ ಕಂಠದಿಂದ ಶ್ಲಾಘಿಸುವ ಜಾಗತಿಕ ದಿನವಾಗಿದೆ. ಈ ದಿನವು ಲಿಂಗ ಸಮಾನತೆಯನ್ನು ವೇಗಗೊಳಿಸಲು ಕ್ರಮಕ್ಕೆ ಕರೆ ನೀಡುತ್ತದೆ ಎಂದು ನಗರದ “ವಿವಾ ಫಿಟ್ನೆಸ್” ಕೇಂದ್ರದ ಒಡತಿ ವಿಜಯಲಕ್ಷ್ಮಿ ಗಿರಿಗಾಂವಿ ಹೇಳಿದರು.
ಭಾನುವಾರ ಸಂಜೆ ನಗರದ ಹೊರವಲಯದ ಭೂತನಾಳ ಕೆರೆ ಉದ್ಯಾನವನದಲ್ಲಿ “ವಿವಾ ಫಿಟ್ನೆಸ್” ಕೇಂದ್ರದಿಂದ ಹಮ್ಮಿಕೊಂಡ ಸಂತೋಷಕೂಟ ಹಾಗೂ “ವಿವಾ ಫಿಟ್ನೆಸ್” ಸಾಧಕಿಯರಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಹೆಣ್ಣು ಬ್ರೂಣ ಹತ್ಯೆ ನಿಷೇದಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಹಣದಾಸೆಗಾಗಿ ಅಲ್ಲಲ್ಲಿ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ವಿಜಯಲಕ್ಷ್ಮಿ ಕಳವಳ ವ್ಯಕ್ತಪಡಿಸಿದರು.
ಈ ವೇಳೆ ಗೌರವ ಪುರಸ್ಕೃತರ ಪರವಾಗಿ ’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಮಾತನಾಡಿ, ಮಹಿಲೆ ತಾನು ಅಬಲೆಯಲ್ಲ ಸಬಲೆ ಎಂದು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸಮಾನವಾಗಿ ಸಾಧನೆಗಳನ್ನು ಮಾಡಿ ಪ್ರಖ್ಯಾತರಾಗಿ ಅಪ್ರತಿಮ ಮಹಿಳೆ ಎಂದು ಕರೆಸಿಕೊಂಡಿದ್ದಾರೆ. ಹೀಗಿದ್ದೂ ಸಮಾಜದಲ್ಲಿ ಇನ್ನೂ ಲಿಂಗ ತಾರತಮ್ಯ ಮುಂದುವರೆದಿರುವುದು ವಿಷಾದಕರ ಸಂಗತಿ ಎಂದು ನುಡಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಸವಿತಾ ಅಗಸರ, ಹೇಮಾ ದೇಸಾಯಿ, ಪುಷ್ಪಾ ಗಡಿನಾಯಕ, ಮೋನಾ ಬಿರಾದಾರ, ಭೈರವಿ, ಐಶ್ವರ್ಯ, ಕಾವ್ಯಾ ಶಿಲವಂತ, ಹೇಮಾ ಗಡಬಳ್ಳಿ ಅವರಿಗೆ ವಿಜಯಲಕ್ಷ್ಮಿ ಗಿರಿಗಾಂವಿ ಗೌರವಿಸಿ ಪುರಸ್ಕರಿಸಿದರು.
ನಂತರ ನಡೆದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

