ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆಯಲು ಎಂ. ಬಿ. ಪಾಟೀಲರನ್ನು ಮತ್ತೋಮ್ಮೆ ಭಾರಿ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಆಶಾ ಎಂ. ಪಾಟೀಲ ಹೇಳಿದ್ದಾರೆ.
ತಿಕೋಟಾ ತಾಲೂಕಿನ ಧನರ್ಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡ ಅವರು ಮಾತನಾಡಿದರು.
ತಮ್ಮೆಲ್ಲರ ಆಶೀರ್ವಾದದಿಂದ ಎಂ. ಬಿ. ಪಾಟೀಲರು ಶಾಸಕರಾಗಿ ಜಲಕ್ರಾಂತಿ ಮಾಡಲು ಸಾಧ್ಯವಾಗಿದೆ. ಈ ಭಾರಿಯೂ ತಾವೆಲ್ಲರೂ ಸಂಪೂರ್ಣವಾಗಿ ಬೆಂಬಲ ನೀಡಬೇಕು. ಮತಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆಯಲು ಮತ್ತು ಬಂಗಾರದ ಬಬಲೇಶ್ವರ ಮತಕ್ಷೇತ್ರ ಮಾಡಲು ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಈವರೆಗೆ ಎಂ. ಬಿ. ಪಾಟೀಲರಿಗೆ ಮತ ಹಾಕುವ ಮೂಲಕ ಬೆಂಬಲವಾಗಿ ನಿಂತಿದ್ದೀರಿ. ನಿಮ್ಮ ಆಶೀರ್ವಾದ ಇದೇ ರೀತಿ ಮುಂದುವರೆಯಲಿ ಇತರರಿಗೆ ಸ್ಪೂರ್ತಿಯಾಗಲಿ. ಮುಂಬರುವ ದಿನಗಳಲ್ಲಿ ಮತಕ್ಷೇತ್ರದಲ್ಲಿ ಕ್ಷೀರಕ್ರಾಂತಿ, ಫುಡ್‍ಪಾರ್ಕ್ ಸ್ಥಾಪನೆ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ, ಮಹಿಳೆಯರು ಮತ್ತು ಯುವಕರು ಸ್ವಾವಲಂಬಿಯಾಗಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇದರಿಂದ ಜನರ ಬದುಕು ಉಜ್ವಲವಾಗಲಿದೆ ಎಂದು ಆಶಾ ಎಂ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ರಾಜು ಜೋರಾಪುರ, ದಾನಪ್ಪ ಚೌದ್ರಿ, ಬಸವರಾಜ ತೇಲಿ, ಚಾಂದಸಾಬ ಹಳ್ಳಿ, ಭಾಗೀರಥಿ ತೇಲಿ, ಶಹನಾಜ, ಲಾಯಪ್ಪ ವಠಾರ, ಶಿವಪ್ಪ ವಠಾರ, ಲಕ್ಷ್ಮೀಬಾಯಿ ವಠಾರ ಮುಂತಾದವರು ಉಪಸ್ಥಿತರಿದ್ದರು.