ಡಬಲ್ ಎಂಜಿನ್ ಸರಕಾರದ ಹೆಸರಿನಲ್ಲಿ ಸಿಂಗಲ್ ಡ್ರೈವರ್ ಇದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕ
ವಿಜಯಪುರ: ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಬೇಕಾದರೆ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮತದಾರರ ತೀರ್ಪಿಗೆ ವಿರುದ್ಧವಾದ ಹೇಳಿಕೆಯಾಗಿದೆ ಎಂದು ಭಾರತದ ಪ್ರಧಾನಮಂತ್ರಿಗಳ ಕಾರ್ಯಾಲಯದ ಕಾರ್ಯಾಚರಣೆ ವಿಭಾಗದ ಮಾಜಿ ನಿರ್ದೇಶಕ
ಸುಧೀಂದ್ರ ಕುಲಕರ್ಣಿ ಅಭಿಪ್ರಾಯಪಟ್ಟರು.
ಭಾನುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಈಗ ವಾಜಪೇಯಿ ಮತ್ತು ಅಡ್ವಾಣಿ ಪಕ್ಷವಾಗಿ ಉಳಿದಿಲ್ಲ. ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ನಾನು 2012ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೂ ಮುಂಚೆ ಬಿಜೆಪಿ ಬಿಟ್ಟು ಬಂದಿದ್ದೇನೆ. ಈಗ ಯಾವ ಪಕ್ಷದಲ್ಲಿಯೂ ಗುರುತಿಸಿಕೊಂಡಿಲ್ಲ ಎಂದು ಹೇಳಿದರು.
ಬದಲಾವಣೆಗಾಗಿ ಬಿಜೆಪಿ ಎಂದು ಹೇಳಿಕೊಂಡು ಚುನಾವಣೆ ಎದುರಿಸಿದ ಬಿಜೆಪಿ ಅಧಿಕಾರಕ್ಕಾಗಿ ಆಪರೇಷನ್ ಕಮಲದ ಮೂಲಕ ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರ ನಡೆಸಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ನೀಡಬೇಕು. ಇಲ್ಲದಿದ್ದರೆ, ಅತಂತ್ರ ಪರಿಸ್ಥಿತಿ ಎದುರಾಗಿ ಮತ್ತೊಮ್ಮೆ ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ತಿಳಿಸಿದರು.
“ನಾ ಖಾವೂಂಗಾ, ನಾ ಖಾನೆ ದೂಂಗಾ” ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪ ಎದುರಾದರೂ ಚಕಾರ ಎತ್ತಿಲ್ಲ. “ಸಬ್ ಕಾ ಸಾಥ್ ಸಬ್ ಕಾ ವಿಕಾಸ” ಎಂದು ಹೇಳುತ್ತಾರೆ. ಆದರೆ, ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿದೆ. ಡಬಲ್ ಎಂಜಿನ್ ಎಂಬುದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನಿಲುವಾಗಿದೆ. ನಮ್ಮದು ಬಹುಪಕ್ಷಿಯ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಆದರೆ, ಡಬಲ್ ಎಂಜಿನ ಸರಕಾರದ ಹೆಸರಿನಲ್ಲಿ ಸಿಂಗಲ್ ಡ್ರೈವರ್ ಇದ್ದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 224 ಮತಕ್ಷೇತ್ರಗಳ ಪೈಕಿ ಬಿಜೆಪಿ ಮುಸ್ಲಿಂ ಸಮುದಾಯದ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಇದರಿಂದ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆಗಳಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮೀತ ಶಾ ಹೇಳುತ್ತಾರೆ. ಆದರೆ, ಈಗ ಮಣಿಪುರದಲ್ಲಿ ಡಬಲ್ ಎಂಜಿನ ಸರಕಾರ ಅಧಿಕಾರದಲ್ಲಿದ್ದರೂ ಅಲ್ಲಿ ನಡೆದ ಹಿಂಸಾಚಾರ ಮತ್ತು 50 ಕ್ಕೂ ಹೆಚ್ಚು ಜನರ ಸಾವಿನ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಎಂಬುದು ಮಾರಕ ರೋಗ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿಲ್ಲುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ, ಚಿಂತಕರು ಸರಕಾರÀಕ್ಕೆ ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ಮಾರ್ಗದರ್ಶನ ಮಾಡಬೇಕು ಎಂದು ಅವರು ಹೇಳಿದರು.
ಬಿಜೆಪಿ ಇಬ್ಬರು ವ್ಯಕ್ತಿಗಳ ಕೈಯ್ಯಲ್ಲಿ ಸಿಲುಕಿದೆ, ಆರ್ ಎಸ್ ಎಸ್ ನಲ್ಲೂ ಅಸಮಾಧಾನವಿದೆ
ಬಿಜೆಪಿಯ ಹಿರಿಯ ನಾಯಕರಾದ ಅಟಲ ಬಿಹಾರಿ ವಾಜಪೇಯಿ ಮತ್ತು ಲಾಲಕೃಷ್ಣ ಅಡ್ವಾಣಿ ನಿಜಕ್ಕೂ ಆದರ್ಶ ನಾಯಕರು. ಆದರೆ, ಈಗ ಅವರನ್ನು ಬಿಜೆಪಿಯವರೇ ಮರೆತಿದ್ದಾರೆ. ಈಗ ಮೋದಿ ಮತ್ತು ಅಮೀತ ಶಾ ಅವರ ಕೈಯಲ್ಲಿ ಬಿಜೆಪಿ ಸಿಲುಕಿದ್ದು, ಸಂಘ- ಪರಿವಾರದ ಹಿಡಿತದಲ್ಲಿಯೂ ಪಕ್ಷ ಉಳಿದಿಲ್ಲ. ಆರ್.ಎಸ್.ಎಸ್ ವರಿಷ್ಠರಲ್ಲಿಯೂ ಈ ಬಗ್ಗೆ ಅಸಮಾಧಾನವಿದೆ. ಆದರೂ, ರಾಜ್ಯದಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆದರೂ ಆರ್.ಎಸ್.ಎಸ್ ಏಕೆ ಧ್ವನಿ ಎತ್ತಲಿಲ್ಲ ಎಂದು ಸುಧೀಂದ್ರ ಕುಲಕರ್ಣಿ ಪ್ರಶ್ನಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಪ್ರಸ್ತಾಪವಿದೆ. ಆದರೆ, ಇದು ಅಗತ್ಯವಿರಲಿಲ್ಲ. ಭಜರಂಗದಳ ನಿರ್ಧಿಷ್ಟ ಸಮುದಾಯದ ವಿರುದ್ಧ ಕೆಲಸ ಮಾಡುತ್ತಿದೆ. ದ್ವೇಷ ಹರಡುವ ಸಂಘಟನೆಗಳ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕಿತ್ತು ಎಂದು ಹೇಳಿದ ಅವರು, ಪ್ರತಿಪಕ್ಷಗಳ ವಿರುದ್ಧ ಈ ಐಟಿ ಮತ್ತು ಇಡಿಯಂಥ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡುವುದು ತಪ್ಪು. ಭ್ರಷ್ಟಾಚಾರ ಆರೋಪದಡಿ ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸದೇ, ಬಿಜೆಪಿಯಲ್ಲಿರುವ ಭ್ರಷ್ಟರ ವಿರುದ್ಧವೂ ಕಾರ್ಯಾಚರಣೆ ಮಾಡಬೇಕು ಎಂದು ಅವರು ಹೇಳಿದರು.
ಎಂ. ಬಿ. ಪಾಟೀಲರ ಅವಧಿಯಲ್ಲಿ ಸುಜಲಾಂ ಸುಫಲಾಂ
ನಾನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನವನಾಗಿದ್ದು, ಈ ಮುಂಚೆ ವಿಜಯಪುರ ಜಿಲ್ಲೆ ಬರದ ನಾಡಾಗಿತ್ತು. ಆದರೆ, ಜಲಸಂಪನ್ಮೂಲ ಸಚಿವರಾಗಿ ಎಂ. ಬಿ. ಪಾಟೀಲರು ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಿದ್ದಾರೆ. ಈ ಭಾಗ ಈಗ ‘ಸುಜಲಾಂ ಸುಫಲಾಂ’ ಆಗಿದೆ. ಇದು ಕೇವಲ ಕರ್ನಾಟಕಕ್ಕμÉ್ಟೀ ಅಲ್ಲ, ಇಡೀ ದೇಶಕ್ಕೆ ಮಾದರಿಯಾಗಿದೆ. ಇದರ ಜೊತೆ ತಮ್ಮ ಸಂಸ್ಥೆಯ ಮೂಲಕ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಮೂಲಕ ನಾಡಿನ ಶರಣರು ಮತ್ತು ಸೂಫಿ ಸಂತರು ಹಾಗೂ ಆದಿಲ್ ಶಾಹಿ ಮನೆತನದ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯಾಸಕ್ತರಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮುಂದಿನ ಸರಕಾರದಲ್ಲಿ ಎಂ. ಬಿ. ಪಾಟೀಲ ಅವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಸಿಗುವುದು ಖಚಿತ. ವಿಜಯಪುರ ಮತ್ತು ಸುತ್ತಲಿನ ಜಿಲ್ಲೆಗಳು ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳ ಮಾದರಿಯಲ್ಲಿ ಅಭಿವೃದ್ಧಿಯಾಬೇಕು ಎಂಬ ಅವರ ಕನಸು ನನಸು ಮಾಡಲು ಮತದಾರರು ಎಂ. ಬಿ. ಪಾಟೀಲ ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಅಗತ್ಯವಾಗಿದೆ ಎಂದು ಸುಧೀಂದ್ರ ಕುಲಕರ್ಣಿ ಹೇಳಿದರು.