ಬಸವನಬಾಗೇವಾಡಿ: ಬಿಜೆಪಿ ಸರ್ಕಾರ ಬಂಜಾರ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕುವ ಹುನ್ನಾರ ನಡೆಸಿದೆ. ಬಂಜಾರ ಸಮಾಜಕ್ಕೆ ಬಿಜೆಪಿ ಅನ್ಯಾಯ ಮಾಡಿದೆ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ರಾಜ್ಯದಲ್ಲಿನ ಭ್ರಷ್ಟ ಸರ್ಕಾರ ತೊಲಗಬೇಕು. ಪರಿಶಿಷ್ಟ ಜಾತಿಯಲ್ಲಿ ಒಡಕು ತಂದ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು ಎಂದು ವಿಧಾನ ಪರಿಷತ್ ಸಚೇತಕ ಪ್ರಕಾಶ ರಾಠೋಡ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಂತ ಸೇವಾಲಾಲರ ಜಯಂತಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ, ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ ಸರ್ಕಾರದಲ್ಲಿ ಬಂಜಾರ ಅಭಿವೃದ್ಧಿ ನಿಗಮಕ್ಕೆ ರೂ.470 ಕೋಟಿ ಅನುದಾನ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಕೇವಲ ರೂ.70 ಕೋಟಿ ಅನುದಾನ ನೀಡುವ ಮೂಲಕ ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದೆ. ಶಾಸಕ ಶಿವಾನಂದ ಪಾಟೀಲರು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಅವರನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಶಕ ಶಿವಾನಂದ ಪಾಟೀಲ ಮಾತನಾಡಿ, ನಾನು ಶಾಸಕನಾದ ಮೇಲೆ ಕ್ಷೇತ್ರದ ಎಲ್ಲ ಗ್ರಾಮಗಳು ಸಂಪರ್ಕಿಸಲು ಸುಸಜ್ಜಿತ ರಸ್ತೆ, ಬಾರಕೇಡ್-ಬೀಳಗಿ ಹಾಗೂ ಬಿಜ್ಜಳ ರಾಜ್ಯ ಹೆದ್ದಾರಿ ಮಾಡಲಾಗಿದೆ. ಕ್ಷೇತ್ರದಲ್ಲಿ ನೀರಿನ ಕೊರತೆಯಾಗದಂತೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ. ಬಸವನಬಾಗೇವಾಡಿಯಲ್ಲಿ ಭವ್ಯವಾದ ಬಸವ ಭವನ, ಮೆಗಾ ಮಾರುಕಟ್ಟೆ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಕೆಲವರು ಕ್ಷೇತ್ರದಲ್ಲಿ ಏನು ಅಭಿವೃದ್ಧಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಅಂತಹವರ ಮಾತಿಗೆ ಮತದಾರರು ಮರುಳಾಗಲಾರರು. ಇನ್ನಷ್ಟು ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಜಿ.ಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಯಕ, ಈಶ್ವರ ಜಾಧವ ಇತರರು ಮಾತನಾಡಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿ ರಾಠೋಡ, ಬಸಣ್ಣ ದೇಸಾಯಿ, ಭರತ ಅಗರವಾಲ, ಹರಿಲಾಲ ನಾಯಕ, ಕಾಶೀನಾಥ ರಾಠೋಡ, ರವಿ ರಾಠೋಡ ಇದ್ದರು.