ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಎಲ್ಲ ಖಾಸಗಿ ನೊಂದಾಯಿತ ಆರೋಗ್ಯ ಸಂಸ್ಥೆಗಳು, ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು ಸಂಸ್ಥೆಯ ಆವರಣದಲ್ಲಿ ಕೆಪಿಎಂಇ ನಿಯಮದನ್ವಯ ನಿಗದಿತ ನಮೂನೆಯ ಫಲಕಗಳನ್ನು ಮಾ.೧೦ರೊಳಗೆ ಕಡ್ಡಾಯವಾಗಿ ಅಳವಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನೊಂದಾಯಿತ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಕೆಪಿಎಂಇ ನಿಯಮ ೨೦೦೯ರ ನಿಯಮ ೫ರ ನೊಂದಣಿಯನ್ವಯ ವೈದ್ಯಕೀಯ ಚಿಕಿತ್ಸಾ ಪದ್ಧತಿ ವಿಧಾನ, ಸಂಸ್ಥೆಯ ಹೆಸರು, ನೊಂದಣಿ ಪ್ರಮಾಣ, ಸಂಸ್ಥೆಯ ಹೆಸರು, ಮಾಲೀಕರು, ವ್ಯವಸ್ಥಾಪಕರ ಹೆಸರು, ಸಂಸ್ಥೆಯಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಫಲಕಗಳನ್ನು ಪ್ರದರ್ಶಿಸುವುದು ನಿಯಮವಿದೆ. ಆದರೆ ಕೆಲವು ನೊಂದಾಯಿತ ಖಾಸಗಿ ಸಂಸ್ಥೆಗಳು ನಾಮಫಲಕಗಳನ್ನು ಅಳವಡಿಸಿಕೊಂಡಿರುವುದಿಲ್ಲ. ಇಂತಹ ಸಂಸ್ಥೆಗಳು ನಿಗದಿತ ನಮೂನೆಯಲ್ಲಿ ನಾಮಫಲಕಗಳ ಅಳವಡಿಕೆಗೆ ಕೊನೆಯ ಅವಕಾಶ ಒದಗಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಅಳವಡಿಸದೇ ಇರುವ ಸಂಸ್ಥೆಗಳ ವಿರುದ್ಧ ಕಾನೂನು ರಿತ್ಯ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಜಯಪುರ ತಾಲೂಕಿನಲ್ಲಿ ಕೆಪಿಎಂಇ ಅಡಿ ನೊಂದಣಿಯಾದ ೫೦೦ ಆರೋಗ್ಯ ಸಂಸ್ಥೆಗಳ ಪೈಕಿ ೧೯೬ ಸಂಸ್ಥೆಗಳು ನಾಮಫಲಕಗಳನ್ನು ಅಳವಡಿಸಿದ್ದು, ೦೬ ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. ಬಸವನಬಾಗೇವಾಡಿ ತಾಲೂಕಿನಲ್ಲಿ ನೊಂದಣಿಯಾದ ೬೮ ಸಂಸ್ಥೆಗಳ ಪೈಕಿ ೧೬ ಸಂಸ್ಥೆಗಳು ನಾಮಫಲಕಗಳು ಅಳವಡಿಸಿಕೊಂಡಿವೆ. ೧೫ ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ನೊಂದಣಿಯಾದ ೭೫ ಸಂಸ್ಥೆಗಳ ಪೈಕಿ ೬೫ ಸಂಸ್ಥೆಗಳು ನಾಮಫಲಕ ಅಳವಡಿಸಿಕೊಂಡಿದ್ದು, ೧೪ ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. ಇಂಡಿ ತಾಲೂಕಿನಲ್ಲಿ ನೊಂದಣಿಯಾದ ೭೭ ಸಂಸ್ಥೆಗಳ ಪೈಕಿ ೪೫ ಸಂಸ್ಥೆಗಳು ನಾಮಫಲಕ ಅಳವಡಿಸಿಕೊಂಡಿದ್ದು, ೦೬ ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. ಸಿಂದಗಿ ತಾಲೂಕಿನಲ್ಲಿ ನೊಂದಣಿಯಾದ ೯೭ ಸಂಸ್ಥೆಗಳ ಪೈಕಿ ೬೦ ಸಂಸ್ಥೆಗಳು ನಾಮಫಲಕ ಅಳವಡಿಸಿಕೊಂಡಿದ್ದು, ೦೬ ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. ಜಿಲ್ಲೆಯಾದ್ಯಂತ ಕೆಪಿಎಂಇ ಅಡಿ ಕ್ರಮ ಜರುಗಿಸಿ ಜಿಲ್ಲೆಯ ೩೮೨ ಆರೋಗ್ಯ ಸಂಸ್ಥೆಗಳು ನಾಮಫಲಕ ಅಳವಡಿಸಿಕೊಂಡಿದ್ದು, ಒಟ್ಟು ೪೭ ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
