ಬೆಳ್ಳುಬ್ಬಿಯವರಿಗೆ ಬೆಂಬಲ ಸೂಚಿಸಿದ ಕೊಲ್ಹಾರದ ಅಂಬೀಗರ ಸಮಾಜ
ಕೊಲ್ಹಾರ: ಕಳೆದ ನನ್ನ ಅಧಿಕಾರವಧಿಯಲ್ಲಿ ಆಶ್ರಯ ಯೋಜನೆಯಡಿ ಮನೆಗಳ ಹಂಚಿಕೆ ವೇಳೆ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಮುಸ್ಲಿಂ ಸಮುದಾಯಕ್ಕಾಗಿ 518 ಮನೆಗಳನ್ನು ನೀಡಿದ್ದೆ. ಆದರೆ ಠರಾವು ಪ್ರಕ್ರಿಯೆ ತಡವಾದ ಕಾರಣ ಹಿಂದೂ ಸಮುದಾಯದ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿರಲಿಲ್ಲ. ಹಾಗಾಗಿ ಈ ಬಾರಿ ಪಟ್ಟಣದ ಎಲ್ಲಾ ಸಮುದಾಯದ ಬಡವರಿಗಾಗಿ ಕನಿಷ್ಠ 4-5 ಸಾವಿರ ಮನೆಗಳನ್ನು ನೀಡುವ ಗುರಿ ಇದೆ. ಯಾರು ಶೆಡ್ ನಲ್ಲಿ ವಾಸಿಸಬಾರದೆಂಬುದು ನನ್ನ ಆಸೆ ಎಂದು ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಅವರು ವಾಗ್ದಾನ ಮಾಡಿದರು.
ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಭಾನುವಾರ ಕೊಲ್ಹಾರದ ತಳವಾರ ಸಮಾಜದ ಗುರುಹಿರಿಯರು ಹಾಗೂ ಸಮಾ ಜಬಂಧುಗಳು ಸಭೆ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಪೂರ್ಣ ಬೆಂಬಲ ಸೂಚಿಸಿದರು. ಈ ವೇಳೆ ಬೆಳ್ಳುಬ್ಬಿಯವರು ಮಾತನಾಡಿ, ಕೊಲ್ಹಾರವಷ್ಟೇ ಅಲ್ಲ ಬಸವನ ಬಾಗೇವಾಡಿ ಮತಕ್ಷೇತ್ರದ ಎಲ್ಲಾ ಬಡವರಿಗೆ ಸೂರು ಕಲ್ಪಿಸುವ ಗುರಿ ಹೊಂದಿದ್ದೇನೆ. ಉಳಿದಂತೆ ಸಮುದಾಯಭವನಗಳು, ದೇವಸ್ಥಾನಗಳ ಅಭಿವೃದ್ಧಿ ಸೇರಿ ಜನರಿಗೆ ಆದ್ಯತೆ ಮೇರೆಗೆ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸುತ್ತೇನೆ ಎಂದರು.
ಸಂಘ ಪರಿವಾರದ ಹಿರಿಯರಾದ ಡಾ.ಬಸಯ್ಯ ಗಣಕುಮಾರ, ದುಂಡಪ್ಪ ಮಾಸ್ತರ, ಮಲ್ಲೇಶಪ್ಪ ಡಾಕ್ಟರ್ ಸೇರಿದಂತೆ ಹಲವು ಹಿರಿಯರ ಆಶಿರ್ವಾದದಿಂದ ನನ್ನಲ್ಲಿ ಜನಸೇವೆ ಮಾಡುವ ಹಾಗೂ ಯಾವುದೇ ಕಷ್ಟ ಬಂದರೂ ಗುರಿ ಬಿಡಬಾರದು ಎಂಬ ಛಲ ಇಮ್ಮಡಿಗೊಂಡಿತು. ಹಿಂದೆ ಬಾಗೇವಾಡಿ ಮತಕ್ಷೇತ್ರದಲ್ಲಿ ಜನಸಂಘದಿಂದ ನನ್ನ ಗುರುಗಳಾದ ಡಾ.ಬಸಯ್ಯ ಗಣಕುಮಾರ ಸ್ಪರ್ಧಿಸಿ ಕಡಿಮೆ ಮತಗಳಿಂದ ಸೋತಿದ್ದರು. ಆಗ ಚಾಣಕ್ಯ ಚಂದ್ರಗುಪ್ತನನ್ನು ಬೆಳೆಸಿದಂತೆ ಡಾ.ಬಸಯ್ಯ ಅವರು ತಮ್ಮ ಒಬ್ಬ ಶಿಷ್ಯನನ್ನು ಇಲ್ಲಿ ಬೆಳೆಸಬೇಕೆಂದು ಸಂಕಲ್ಪಿಸಿದ ಕಾರಣ ಇಂದು ನಾನು ಈ ಹಂತಕ್ಕೆ ಬಂದಿದ್ದೇನೆ ಎಂದು ಸಂಘ ಪರಿವಾರದ ತಮ್ಮ ಹಿರಿಯರನ್ನು ಸ್ಮರಿಸಿಕೊಂಡರು. ಇದೇ ವೇಳೆ ಹಿರಿಯರಾದ ಸಿ.ಎಂ ಗಣಕುಮಾರ ಮಾತನಾಡಿದರು.
ಸಭೆಯಲ್ಲಿ ಉತ್ತರಾಖಂಡ ರಾಜ್ಯಸಭಾ ಸದಸ್ಯ ನರೇಶ ಬನ್ಸಾಲ್, ಮಂಡಲ ಬಿಜೆಪಿ ಅಧ್ಯಕ್ಷ ಶಂಕರಗೌಡ ಪಾಟೀಲ್ ಮುಖಂಡರಾದ ಮಲ್ಲಪ್ಪ ಕೊಠಾರಿ, ಬಸಪ್ಪ ಕೊಠಾರಿ, ಬಸಪ್ಪ ಕೋಲಕಾರ, ಮುದಕಪ್ಪ ಶಿಂದಿ, ಶಶಿಧರ ದೇಸಾಯಿ, ಜಿ.ಎನ್.ಗಣಿ, ವಿರೂಪಾಕ್ಷಿ ಕೊಲಕಾರ ಹಾಗೂ ಹಲವರಿದ್ದರು.