ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಉದ್ಯಾನವನದಲ್ಲಿ ಜೋಡೆತ್ತು ರೈತ ಬಾಂಧವರು ಕೃಷಿ ತಜ್ಞ ಡಾ.ಬಸವರಾಜ ಬಿರಾದಾರ ನೇತೃತ್ವದಲ್ಲಿ ನಡೆಸುತ್ತಿರುವ ನಂದಿ ಸತ್ಯಾಗ್ರಹಕ್ಕೆ ಮಂಗಳವಾರ ಸ್ಥಳೀಯ ವಿವೇಕ ಬಿಗ್ರೇಡ್ ಸಂಘಟನೆಯು ಬೆಂಬಲ ಪತ್ರ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ವಿವೇಕ ಬಿಗ್ರೇಡ್ ಸಂಘಟನೆಯ ಮುಖ್ಯಸ್ಥ ವಿನುತ ಕಲ್ಲೂರ ಮಾತನಾಡಿ, ರಾಜ್ಯದಲ್ಲಿ ಸದ್ಗುರು ಅವರು ಆರಂಭಿಸಿದ್ದ ಜನಪರ ಅಭಿಯಾನಗಳಾದ ಕಾವೇರಿ ಕೂಗು, ಮಣ್ಣು ಉಳಿಸಿ ಅಭಿಯಾನಗಳಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಅವುಗಳಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಮಣ್ಣು, ನೀರು ಉಳಿಯಬೇಕಾದರೆ ನಂದಿ ಸಂತತಿ ಉಳಿಯಬೇಕೆಂಬ ಸತ್ಯದ ಅರಿವು ನಂದಿ ಸತ್ಯಾಗ್ರಹದಿಂದ ಜನ ಜಾಗೃತಿಯಾಗುತ್ತಿದೆ. ಸಮಾಜದ ಭವಿಷ್ಯ ಜೋಡೆತ್ತಿನ ಕೃಷಿಕರ ಮೇಲೆ ನಿಂತಿರುವದರಿಂದಾಗಿ ಜೋಡೆತ್ತಿನ ಕೃಷಿಕರಿಗೆ ಸರ್ಕಾರ ಪ್ರತಿ ತಿಂಗಳು ರೂ. ೧೧ ಸಾವಿರ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರುವ ಅಗತ್ಯವಿದೆ. ಈ ಕುರಿತು ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಹಣ ಮೀಸಲಿಡುವ ಅಗತ್ಯವಿದೆ. ಜೋಡೆತ್ತಿನ ಕೃಷಿಕರ ಬೇಡಿಕೆಗಳಿಗೆ ವಿವೇಕ ಬಿಗ್ರೇಡ್ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದರು.
ಯುವ ಮುಖಂಡ ರವಿಗೌಡ ಚಿಕ್ಕೊಂಡ ಮಾತನಾಡಿ, ಮೂಲನಂದೀಶ್ವರ ದೇವಸ್ಥಾನದಲ್ಲಿ ನಂದಿ ಸತ್ಯಾಗ್ರಹ ಹಮ್ಮಿಕೊಂಡಿರುವದು ಅತ್ಯಂತ ವಿಶೇಷ ಸಂಗತಿ. ನಂದಿ ಸಂತತಿ ಉಳಿಸುವ ಮಾರ್ಗವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ಪ್ರತಿಯೊಂದು ಸಂಘ-ಸಂಸ್ಥೆಗಳು ಜೋಡೆತ್ತಿನ ಕೃಷಿಕರೊಂದಿಗೆ ನಿಂತು ಅವರ ಬೇಡಿಕೆಗಳನ್ನು ಈಡೇರಿಸುವ ಜೋಡೆತ್ತು ಉಳಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ತಜ್ಞ ಬಸವರಾಜ ಬಿರಾದಾರ, ಬಿಗ್ರೇಡ್ ಸದಸ್ಯರಾದ ಮಣಿಕಂಠ ದೇಸಾಯಿ, ಸತೀಶ ಕ್ವಾಟಿ, ಸಚೀನ ಕಲ್ಲೂರ, ಪ್ರಭಾಕರ ಖೇಡದ, ಸುನೀಲ ಬೇದರಕರ, ಪ್ರತೀಕ ಕರಾಡೆ, ಪ್ರಾಣೇಶ ಹೂಗಾರ, ಆಕಾಶ ದುಂಬಾಳ, ಮಹೀಂದ್ರ ಕುಮಾವತ, ಪ್ರವೀಣ ದಂಡಾವತಿ, ಸಂಗಮೇಶ ಹುಜರತಿ, ಕಾಶಿನಾಥ ಕನಸೆ ಇತರರು ಇದ್ದರು.

