ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಪೂರ್ಣಗೊಳ್ಳಬೇಕಾದರೆ ವಿದ್ಯಾರ್ಥಿಗಳು ತಮ್ಮ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ನೀಡಬೇಕಾದ ಅಗತ್ಯವಿದೆ. ಆಗ ಮಾತ್ರ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸನ್ನು ಹೊಂದಲು ಸಾಧ್ಯ ಎಂದು ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಜಯಪುರದ ನೆಹರು ಯುವ ಕೇಂದ್ರ, ಕ್ರೀಡಾ ಸಚಿವಾಲಯ, ಅಲ್‌ಪಾತ ಯುಥ್ ವೆಲ್ಪೇರ ಸೊಸೈಟಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೦೨೪-೨೫ ರ ತಾಲೂಕು ಮಟ್ಟದ ಕ್ರೀಡಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಂಡು ನಿರಂತರವಾಗಿ ಶ್ರದ್ಧೆಯಿಂದ ಮುಂದುವರೆದರೆ ವಿಶ್ವಮಟ್ಟದ ಕ್ರೀಡಾಪಟುವಾಗುವ ಮೂಲಕ ದೇಶದ ಗೌರವವನ್ನು ಕಾಪಾಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ಸಾಲವಾಡಗಿ, ಐಕ್ಯೂಎಸಿಯ ಮುಖ್ಯಸ್ಥ ಪ್ರೊ.ದಿಲೀಪಕುಮಾರ, ಎನ್.ವೈ.ವ್ಹಿ ಮುಖ್ಯಸ್ಥ ಎಸ್.ಕೆ.ಜಾಲವಾದಿ, ಎಲ್.ಎಸ್.ಜಮಖಂಡಿ, ಸಿ.ಪಿ.ಧಡೇಕರ, ಡಾ.ಎಸ್.ಬಿ.ಜನಗೊಂಡ, ಎಂ.ಕೆ.ಯಾಧವ, ಪಿ.ಎಸ್.ನಾಟೀಕಾರ,ಆರ್.ಎಂ.ಮುಜಾವರ, ಜಯರಾಮರೆಡ್ಡಿ ಇದ್ದರು. ಡಾ. ವೈ.ಬಿ.ನಾಯಕ ನಿರೂಪಿಸಿದರು. ಕ್ರೀಡಾಕೂಟದಲ್ಲಿ ಚೆಸ್, ಕೇರಂ, ಖೋಖೋ, ಕಬಡ್ಡಿ, ೧೦೦ ಮೀಟರ್, ೪೦೦ ಮೀಟರ್ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

