ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಕಾಲರ್‌ಶಿಪ್ ಪರೀಕ್ಷೆ ನಡೆಸಿ, ಪರೀಕ್ಷೆಯಲ್ಲಿ ಟಾಪ್ ಬಂದಿರುವ ಒಟ್ಟು ೬೦ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಿದ್ದೇವೆ ಎಂದು ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ಅಭ್ಯುದಯ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಸ್ಕಾಲರ್ ಶಿಪ್ ಪರೀಕ್ಷೆ ಬರೆದು ಸ್ಕಾಲರ್‌ಶಿಪ್ ಪಡೆಯಲು ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯ ಮುದ್ದೇಬಿಹಾಳದ ಹಾಗೂ ತಾಲೂಕಿನ ಅಡವಿ ಹುಲಗಬಾಳ, ಮತ್ತು ಕೊಳೂರುಗ್ರಾಮಗಳಲ್ಲಿರುವ ಮೂರು ಶಾಲೆಗಳಲ್ಲಿ ೬ ಮತ್ತು ೮ನೇ ತರಗತಿ ಪ್ರವೇಶಕ್ಕೆ ಈ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಒಟ್ಟು ೪೦೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಮೂರು ಶಾಲೆಗಳಿಗೆ ತಲಾ ೫ ವಿದ್ಯಾರ್ಥಿಗಳಂತೆ ಒಟ್ಟು ೩೦ ವಿದ್ಯಾರ್ಥಿಗಳು ಶಿಕ್ಷಣದ ಸಹಿತ ವಸತಿ ನಿಲಯಕ್ಕೆ ಮತ್ತು ತಲಾ ೫ ವಿದ್ಯಾರ್ಥಿಗಳಂತೆ ಒಟ್ಟು ೩೦ ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ. ಅದರ ಜೊತೆಗೆ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಸ್ಕಾಲರ್‌ಶಿಪ್ ಅಂತಾ ಶಾಲಾ ಶುಲ್ಕದಲ್ಲಿ ಶೇ.೨೦ ರಷ್ಟು ರಿಯಾಯತಿ ನೀಡುತ್ತಿದ್ದೇವೆ, ಅಲ್ಲದೇ ತಂದೆ ತಾಯಿಗಳನ್ನು ಕಳೆದುಕೊಂಡ ಅನಾಥ ಮಕ್ಕಳು ಮತ್ತು ಕಡು ಬಡ ವಿದ್ಯಾರ್ಥಿಗಳಿಗೆ ವಿಶೇಶವಾಗಿ ಉಚಿತ ಶಿಕ್ಷಣ ನೀಡಲು ನಮ್ಮ ಸಂಸ್ಥೆ ಮುಂದಾಗಿದೆ. ಸೌಲಭ್ಯ ಪಡೆಯುವ ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ನಮ್ಮ ಶಾಲೆಗೆ ಗೌರವವನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.
ಈ ವೇಳೆ ಸಂಸ್ಥೆಯ ಆಡಳಿತಾಧಿಕಾರಿ ಬಿ.ಜಿ.ಬಿರಾದಾರ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಪ್ರತಿಭಾನ್ವಿತ ಮತ್ತು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತ ಬಂದಿದ್ದೇವೆ. ಅದರಂತೆ ಈ ವರ್ಷವೂ ಸ್ಕಾಲರ್‌ಶಿಪ್ ಪರೀಕ್ಷೆ ನಡೆಸಿ ಅವಕಾಶ ಕಲ್ಪಿಸಿದ್ದೇವೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಶಾಲೆಗಳ ಪೈಕಿ ಯಾವ ಶಾಲೆಯನ್ನು ಬೇಕಾದರೂ ಆಯ್ದುಕೊಳ್ಳಬಹುದು ಎಂದರು.
ಪರೀಕ್ಷೆ ಬರೆದು ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಶಾಲೆಗಳ ಮುಖ್ಯ ಶಿಕ್ಷಕರುಗಳಾದ ಎಚ್.ಬಿ.ಜಾಯವಾಡಗಿ, ಬಿ.ಕೆ.ಪೂಜಾರಿ, ರಮೇಶ ಹರನಾಳ, ಬಸವರಾಜ ಬಿಜ್ಜೂರ ಸೇರಿದಂತೆ ಇತರರು ಇದ್ದರು.
“ನನ್ನ ತಂದೆ ತಾಯಿಯರನ್ನು ಕಳೆದುಕೊಂಡ ನನಗೆ ಕಳೆದ ಮೂರು ವರ್ಷಗಳಿಂದ ಉಚಿತ ಶಿಕ್ಷಣದ ಜೊತೆಗೆ ವಸತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಿಗೆ ಕೃತಜ್ಞನಾಗಿದ್ದೇನೆ.”
– ಗುರುಮೂರ್ತಿ ಹಿರೇಮಠ
ವಿದ್ಯಾರ್ಥಿ.

