ವಿಜಯಪುರದಲ್ಲಿ ಹಾಡುಹಗಲೇ ನಡೆದ ಶೂಟೌಟ್ ಪ್ರಕರಣ | ಬೆಚ್ಚಿಬಿದ್ದ ನಗರ ಜನತೆ | ಬೆನ್ನಟ್ಟಿ ಕೊಂದ ಹಂತಕರು
ವಿಜಯಪುರ: ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯೆಯ ಪತಿ ಹಾಗೂ ರೌಡಿಶೀಟರೋರ್ವನನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಶನಿವಾರ ನಗರದ ಚಂದಾಪುರ ಕಾಲೋನಿಯಲ್ಲಿ ನಡೆದಿದೆ.
ಹೈದರ ಅಲಿ ನದಾಫ್ ಗುಂಡಿಗೆ ಬಲಿಯಾದ ರೌಡಿಶೀಟರ್ ಎಂದು ಗುರುತಿಸಲಾಗಿದೆ. ಈತನ ಪತ್ನಿ ನಿಶಾತ್ ನದಾಫ್ ಅವರು ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಾರ್ಡ್ ನಂ.19ರ ಪಾಲಿಕೆಯ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ರೌಡಿಶೀಟರ್ ಆಗಿದ್ದ ಹೈದರ್ ನದಾಫ್ ಮೇಲೆ ಗುಂಡಿನ ದಾಳಿ ನಡೆದ ಪರಿಣಾಮ ಹೈದರ್ ನದಾಫ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶನಿವಾರ ಬೆಳಗ್ಗೆ ಮೃತ ಹೈದರ್ ನದಾಫ್ ವಿಜಯಪುರ ನಗರದ ಚಾಂದಪೂರ ಕಾಲೋನಿ ಬಳಿ ಇರುವ ತನ್ನ ನಿವಾಸದಿಂದ ಹೊರಬಂದು ಕಾರು ಹತ್ತುತ್ತಿದ್ದ ವೇಳೆ, ಹೈದರ್ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು, ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದ ತಪ್ಪಿಸಿ ಕೊಳ್ಳಲು ಹೈದರ್ ಓಡಿ ಹೋಗಿದ್ದಾರೆ. ಆದರೆ ಅವನ ಬೆನ್ನಟ್ಟಿದ್ದ ದುಷ್ಕರ್ಮಿಗಳು ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಹೀಗಾಗಿ ಸ್ಥಳದಲ್ಲೇ ಹೈದರ್ ಪ್ರಾಣಪಕ್ಷಿ ಹಾರಿಹೋಗಿದೆ.
ಘಟನೆ ನಡೆದ ಸ್ಥಳದಲ್ಲಿ ಎರಡು ಗುಂಡುಗಳು ಪತ್ತೆಯಾಗಿವೆ.
![WhatsApp Image 2023 05 06 at 10.41.03 PM](https://udayarashminews.com/wp-content/uploads/2023/05/WhatsApp-Image-2023-05-06-at-10.41.03-PM.jpeg)
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಚೆಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೈದರ್ ನದಾಫ್ ವಾರ್ಡ್ ನಂ.19 ರಿಂದ ತಮ್ಮ ಪತ್ನಿ ನಿಶಾತ್ ನದಾಫ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿ ಕೊಂಡಿದ್ದರು. ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ಪಿ ಆನಂದಕುಮಾರ ಅವರು, ಹೈದರ್ ಅಲಿ ರೌಡಿಶೀಟರ್ ಆಗಿದ್ದನು, ಆತನನ್ನು ಹತ್ಯೆ ಮಾಡಿದವರು ಸಹ ರೌಡಿಶೀಟರ್ ಗಳಾಗಿದ್ದಾರೆ ಎಂಬುದರ ಕುರಿತು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಆತನ ಹತ್ಯೆ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹತ್ಯೆಯಾದ ಹೈದರ ಅಲಿ ಪತ್ನಿ ಸ್ಪರ್ಧಿಸಿ ಜಯಗಳಿಸಿದ್ದಳು, ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದು ತನಿಖೆಯಿಂದಲೇ ತಿಳಿದು ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.