ನೀರಾವರಿ ವಿಷಯವಾಗಿ ಎಂ.ಬಿ.ಪಾಟೀಲರ ಬದ್ಧತೆ ಪ್ರಶ್ನಾತೀತ ಎಂದ ಮೋಹಕತಾರೆ
ವಿಜಯಪುರ: ಡಬಲ್ ಇಂಜಿನ್ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದ್ದು, ಬಿಜೆಪಿ ರಾಜ್ಯ ಸರ್ಕಾರ ಟ್ರಬಲ್ ಇಂಜಿನ್ ಸರ್ಕಾರ ಎಂದು ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ದಿವ್ಯಸ್ಪಂದನ ಲೇವಡಿ ಮಾಡಿದರು.
ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಜರಂಗದಳ ಇರಲಿ ಏನೇ ಇರಲಿ ಬ್ಯಾನ್ ಎನ್ನುವುದು ಸರಿಯಲ್ಲ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ, ಧಾರ್ಮಿಕ ವಿಷಯವಾಗಿ ಮಾತನಾಡಿದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸುವ ಅಧಿಕಾರವನ್ನು ನ್ಯಾಯಾಲಯ ಈಗಾಗಲೇ ನಿರ್ದೇಶನ ನೀಡಿದೆ, ಭಜರಂಗದಳ ಅಷ್ಟೇ ಎಲ್ಲ ಯಾರೇ ಧಾರ್ಮಿಕ ಅರಾಜಕತೆ, ಧಾರ್ಮಿಕ ವಿರೋಧಿ ಹೇಳಿಕೆ ನೀಡುವವರ ಮೇಲೆ ಕ್ರಮವಾಗಬೇಕು ಹೊರತು ಸಂಪೂರ್ಣವಾಗಿ ಬ್ಯಾನ್ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆಗಳಿಗೆ ಅವಕಾಶವಿದೆ, ಆದರೆ ಶಾಂತಿ ಯಾರೇ ಕದಡಿದರೂ ಅದರ ಮೇಲೆ ಕ್ರಮವಾಗಬೇಕು ಎಂದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುತ್ರರು ಗಾಳಿಯಲ್ಲಿ ಗುಂಡು ಹಾರಿಸುವ ದೃಶ್ಯಗಳು ಮೈ ಜುಂ ಎನಿಸುವಂತಹದ್ದು, ಈ ರೀತಿಯ ಸಂಸ್ಕೃತಿ ಬೆಳೆಯಬಾರದು. ನಮ್ಮ ಮಕ್ಕಳಿಗೆ ಬಂದೂಕು ಬೇಡ, ಪುಸ್ತಕ ಬೇಕಾಗಿದೆ ಎಂದರು.
ಎಂ.ಬಿ. ಪಾಟೀಲರು ನೀರಾವರಿ ಯೋಜನೆಗಳಿಗೆ ಶರವೇಗ ನೀಡುವ ಮೂಲಕ ಅಂತರ್ಜಲ ವೃದ್ಧಿಯಾಗಿದ್ದು, ಎಂ.ಬಿ. ಪಾಟೀಲರು ಉತ್ತಮ ಕಾರ್ಯ ಮಾಡಿದ್ದಾರೆ, ಕಾವೇರಿ ತೀರ್ಪು ಹೊರಬರುವ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರೂ ಹಮ್ಮು-ಬಿಮ್ಮು ಬಿಟ್ಟು ತೀರ್ಪಿಗಾಗಿ ಅಂಕಿ-ಅಂಶ ಸಂಗ್ರಹಣೆ, ವಿಚಾರ ವಿಮರ್ಶೆ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಇದು ರೈತರು ಹಾಗೂ ನೀರಾವರಿ ವಿಷಯವಾಗಿ ಎಂ.ಬಿ. ಪಾಟೀಲರ ಬದ್ಧತೆ ಹಾಗೂ ವಿಶ್ವಾಸಾರ್ಹತೆ ಪ್ರಶ್ನಾತೀತ ಎಂದರು.
ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ರಾಹುಲ್ ಪಾಟೀಲ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಭಾಗಿರಥಿ ತೇಲಿ ಮೊದಲಾದವರು ಉಪಸ್ಥಿತರಿದ್ದರು.
ಸಕ್ರೀಯ ರಾಜಕಾರಣದ ಯೋಚನೆ ಇಲ್ಲ
ಸಕ್ರೀಯ ರಾಜಕಾರಣ ಪ್ರವೇಶಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮೋಹಕ ತಾರೆ ರಮ್ಯಾ ಅವರು, ಈ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ, ಈಗಂತೂ ಸ್ಟಾರ್ ಪ್ರಚಾರಕಿಯಾಗಿ ಪ್ರಚಾರದಲ್ಲಿ ತೊಡಗಿದ್ದೇನೆ, ಸೋಷಿಯಲ್ ಮೀಡಿಯಾ ಜವಾಬ್ದಾರಿ, ಅನಾರೋಗ್ಯ ಕಾರಣದಿಂದಾಗಿ ಸಕ್ರೀಯ ರಾಜಕಾರಣದಿಂದ ದೂರ ಇದ್ದೆ. ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದು ಪುನ: ಸಕ್ರೀಯ ರಾಜಕಾರಣಕ್ಕೆ ಮರಳುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದರು.