ಒಂಭತ್ತು ವಿವಿಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ಎಬಿವಿಪಿ ಖಂಡನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದ ಒಂಭತ್ತು ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ಕುರಿತಂತೆ ಸೋಮವಾರ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಶಿಕ್ಷಣ ಎನ್ನುವುದು ಹೊರೆಯಲ್ಲ ಅದು ಸರ್ಕಾರಗಳ ಜವಾಬ್ದಾರಿ. ಸರ್ಕಾರ ಈ ವರ್ಷದ ಬಜೆಟ್ನಲ್ಲಿ ಹೊಸ ವಿಶ್ವ ವಿಧ್ಯಾಲಯಗಳಿಗೆ ಅನುದಾನ ನೀಡಬೇಕು ಎಂದರು.
ಕರ್ನಾಟಕ ರಾಜ್ಯ ಗುಣಮಟ್ಟದ ವಿಶ್ವ ವಿದ್ಯಾಲಯಗಳನ್ನು ಹೊಂದಿರುವ ರಾಜ್ಯ, ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವ ಕಾರಣಕ್ಕೆ ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಉನ್ನತ ಶಿಕ್ಷಣವನ್ನ ಪಡೆಯಲು ಬರುತ್ತಾರೆ. ಆದರೆ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯ ಸಭೆಯಲ್ಲಿ ರಾಜ್ಯದ ೯ ವಿಶ್ವವಿದ್ಯಾಲಯಗಳನ್ನು ಆರ್ಥಿಕ ಕಾರಣ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳ ಕೊರತೆಯ ಕಾರಣವನ್ನು ಕೊಟ್ಟು ವಿವಿಗಳನ್ನು ಮುಚ್ಚಲು ನಿರ್ಧರಿಸಿರುವ ಕ್ರಮ ಸರಿಯಲ್ಲ ಎಂದರು.
ರಾಜ್ಯ ಸರ್ಕಾರ ಕೂಡಲೇ ವಿಶ್ವವಿದ್ಯಾಲಯಗಳನ್ನ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದು ವಿಶ್ವವಿದ್ಯಾಲಯಗಳ ಮೂಲಭೂತ ಸೌಲಭ್ಯಕ್ಕೆ ಅನುದಾನವನ್ನು ನೀಡಿ ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕಾಗಿ ಅನುದಾನ ನೀಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತದೆ ಎಂದರು.
ಎಬಿವಿಪಿ ಈ ಕುರಿತು ಈಗಾಗಲೇ ರಾಜ್ಯದ ಹಲವು ಕೇಂದ್ರಗಳಲ್ಲಿ ಭಿಕ್ಷಾಟನೆ ಮಾಡಿ ರಾಜ್ಯದ ಮುಖ್ಯಮಂತ್ರಿಗಳ ಖಾತೆಗೆ ಹಣವನ್ನು ಹಾಕಲಾಗಿದೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪತ್ರ ಚಳುವಳಿ, ಸಚಿವರ ಕಚೇರಿಗೆ ಮುತ್ತಿಗೆ, ಸಹಿ ಸಂಗ್ರಹ, ರಸ್ತೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆಯನ್ನು ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ವಿಜಯಪುರ ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ, ಸಹ ಕಾರ್ಯದರ್ಶಿ ಸ್ನೇಹಾ ಹಿರೇಮಠ ಉಪಸ್ಥಿತರಿದ್ದರು.

