ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೋಸೈಟಿ ಕರ್ನಾಟಕ ಸರ್ಕಾರದ ವತಿಯಿಂದ ಇದೇ ಫೆ.೨೬,೨೭ ಹಾಗೂ ೨೮ ರಂದು ಬೆಂಗಳೂರಿನ ಅಂತರರಾಷ್ಟ್ರೀಯ ಕನವೆನ್ಶನಲ್ ಸೆಂಟರ್‌ನಲ್ಲಿ ಟ್ರಾವೆಲ್ ಎಕ್ಸಪೋ-೨೦೨೫ ಕಾರ್ಯಕ್ರಮ ಭಾಗವಹಿಸಲಿರುವ ವಿದೇಶಿಗರಿಗೆ ರಾಜ್ಯದ ಪರಿಚಯ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದೇಶದ ವಿವಿಧ ಪ್ರವಾಸಿ ನಿರ್ವಾಹಕರ ತಂಡವೊಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಪ್ರವಾಸೋದ್ಯಮ ತಾಣಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿತು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೋಟೆಲ್ ಉದ್ದಿಮೆದಾರರು, ಟ್ರಾವೇಲ್ ಏಜೆನ್ಸಿ, ಹೋಂ-ಸ್ಟೇ ಕರಕುಶಲ ಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ್ ಹೋಲ್ಡರಗಳಿಗೆ ವ್ಯಾಪಾರ -ವಹಿವಾಟಿಕೆ ಮಾಡಿಕೊಳ್ಳಲು ನೂರಾರು ವಿದೇಶಿ ಸಂಸ್ಥೆಗಳು-ದೇಶದ ಎಲ್ಲಾ ಭಾಗದ ಪಾಲುದಾರ ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ವಿದೇಶಿ ಪ್ರವಾಸಿ ನಿರ್ವಾಹಕರ ತಂಡ ವಿಜಯಪುರ ನಗರದ ಗೋಲಗುಮ್ಮಟ, ಗಗನ್ ಮಹಲ್ ಸೇರಿದಂತೆ ವಿವಿಧ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಪ್ರವಾಸಿ ತಾಣಗಳ ವೈವಿಧ್ಯತೆ, ಸಂಸ್ಕೃತಿ ಪರಂಪರೆ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ವಿವಿಧ ಅವಕಾಶಗಳ ಕುರಿತು ಮಾಹಿತಿ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಜಿಲ್ಲೆಯ ಕುರಿತು ಮಾಹಿತಿ ನೀಡಿದರು. ಪ್ರವಾಸಿ ಮಾರ್ಗದರ್ಶಿ ರಾಜಶೇಖರ್ ಕಲ್ಯಾಣ ಮಠಮಾರ್ಗದರ್ಶನ ಮಾಡಿದರು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವಿಜಯಕುಮಾರ, ಧಮೇಂದ್ರ ಜಾಧವ, ಅನಿಲಕುಮಾರ ಬಣಜಿಗೇರ ಸೇರಿದಂತೆ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

