ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾನವ ಜನ್ಮ ಶ್ರೇಷ್ಠವಾದುದು. ಅದರ ಸದ್ಬಳಕೆ ಅಗಬೇಕು. ಸತ್ಕರ್ಮ, ಸತ್ಸಂಗ, ಸದಾಚಾರ ಪಾಲಿಸಿದರೆ ಬದುಕು ಬಂಗಾರವಾಗುತ್ತದೆ ಎಂದು ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು.
ಸೋಮವಾರದಂದು ತಾಲೂಕಿನ ನಾಗಠಾಣ ಗ್ರಾಮದ ಹಿರೇಮಠದಲ್ಲಿ ಉದಯಲಿಂಗೇಶ್ವರ ಶಿವಯೋಗಿಗಳ ರಜತ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸನಾತನ ಸಂಸ್ಕೃತಿ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಮಾನವ ಜನ್ಮ ಸಾರ್ಥಕಗೊಳ್ಳುತ್ತದೆ’ ಎಂದು ಹೇಳಿದರು.
ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಜನ್ಮ ನೀಡಿದ ತಾಯಿ ಸೇರಿದಂತೆ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು. ಇದರಿಂದ ತನ್ನ ಮನೆ ದೇಗುಲವಾಗುತ್ತದೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಸಿಂದಗಿಯ ಷ ಬ್ರ ಪ್ರಭುಸಾರಂಗ ದೇವ ಶಿವಾಚಾರ್ಯರು ಮಾತನಾಡಿ,ಪ್ರತಿದಿನ ಗುಡಿಗೆ ಬಂದು ದೇವರ ಆಶೀರ್ವಾದ ಪಡೆದುಕೊಳ್ಳಬೇಕು. ಇದರಿಂದ ಮನಸ್ಸಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ’ ಎಂದರು.
ನಾಗಠಾಣದ ಷ ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹಾವಿನಾಳದ ಷ ಬ್ರ ವಿಜಯ ಮಹಾಂತೇಶ ಶಿವಾಚಾರ್ಯರು, ಮನಗೂಳಿಯ ಷ ಬ್ರ ಅಭಿನವ ಸಂಗನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾದ ಮಾಜಿ ಜಿಪಂ ಉಪಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉದ್ಯಮಿ ಶರಣಬಸು ಅರಕೇರಿ ಮಾತನಾಡಿದರು. ಬನ್ನೂರಿನ ಷ ಬ್ರ ಸಿದ್ದಲಿಂಗ ಶಿವಾಚಾರ್ಯರು, ಶರಣಬಸು ಪೂಜೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ತೃಶ್ರೀ ಉದಯಲಿಂಗೇಶ್ವರ ಶಿವಯೋಗಿಗಳ ಗದ್ದುಗೆಗೆ ಮಹಾ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ಹೋಮ ಹವನ, ಶ್ರೀ ಉದಯಲಿಂಗೇಶ್ವರ ಶಿವಯೋಗಿಗಳ ನೂತನ ರಜತ ಮೂರ್ತಿಯ ಉತ್ಸವ, ಸುಮಂಗಲೆಯರ ಕುಂಭ ಕಳಸ ಆರತಿ, ಪುಣೆಯ ವಿಶೇಷ ಡೋಲು ಕುಣಿತ ವೈಭವದೊಂದಿಗೆ ಮೆರವಣಿಗೆ ಜರುಗಿತು.
ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಸಂತೋಷ ಬಂಡೆ, ಸುರೇಶ ಹೂಗಾರ,ಬಾಬು ಕೋಲಾರ ಕಾರ್ಯಕ್ರಮ ನಿರ್ವಹಿಸಿದರು.

