ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸುಕ್ಷೇತ್ರ ಕರಭಂಟನಾಳ ಗ್ರಾಮದ ವಿಷಮರ್ಧನ ಗುರು ಗಂಗಾಧರೇಶ್ವರ ಸ್ವಾಮೀಜಿಯವರ ಜಾತ್ರಾಮಹೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವ ಫೆ.೨೬ ಮತ್ತು ೨೭ ರಂದು ಸಡಗರ,ಸಂಭ್ರಮದಿಂದ ಜರುಗಲಿದೆ ಎಂದು ಕರಭಂಟನಾಳ ಹಿರೇಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ತಾಲೂಕಿನ ಕರಭಂಟನಾಳ ವಿಷಮರ್ಧನ ಗುರು ಗಂಗಾಧರೇಶ್ವರ ಹಿರೇಮಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ. ೨೨ ರಿಂದ ಐದು ದಿನಗಳ ಕಾಲ ಸಂಜೆ ೭ ಗಂಟೆಯಿಂದ ೯ ಗಂಟೆಯವರೆಗೆ ಒಂದೊಂದು ದಿನ ಒಬ್ಬರೊಬ್ಬರು ಶ್ರೀಗಳಿಂದ ಧರ್ಮೋಪದೇಶ, ಗಾಯಕರಿಂದ ವಚನ ಗಾಯನ ಹಮ್ಮಿಕೊಳ್ಳಲಾಗಿದೆ. ಈ ಧರ್ಮೋಪದೇಶ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಸ್ವಾಮೀಜಿ, ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಡಾ.ವಿಶ್ವಪ್ರಭು ಶಿವಾಚಾರ್ಯ ಸ್ವಾಮೀಜಿ, ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ. ವಿವಿಧ ಗಾಯಕರಿಂದ ವಚನ ಗಾಯನ ನಡೆಯಲಿದೆ ಎಂದರು.
ಫೆ. ೨೬ ರಂದು ಬೆಳಗ್ಗೆ ವಿಷಮರ್ಧನ ಗುರುಗಂಗಾಧರೇಶ್ವರ ಕರ್ತೃ ಗದ್ದುಗೆಗೆ ಮಹಾಕುಂಬಾಭಿಷೇಕ ನೆರವೇರುವದು. ಸಂಜೆ ಪುರವಂತರೊಂದಿಗೆ ಅಗ್ನಿಪುಟು ನಡೆಯಲಿದೆ. ರಾತ್ರಿ ಮಹಾಶಿವರಾತ್ರಿ ಜಾಗರಣೆ, ರಾಷ್ಟ್ರೀಯ ಭಾವೈಕ್ಯತೆಯ ಸಭೆ ಬೆಂಗಳೂರಿನ ಸರ್ಪಭೂಷಣ ಶ್ರೀ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ನಾಗಣಸೂರಿನ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗಲಿದೆ ಎಂದರು.
ಫೆ.೨೭ ರಂದು ಬೆಳಗ್ಗೆ ಅಗ್ಗಿ ಹಾಯುವುದು, ಪಲ್ಲಕ್ಕಿ ಉತ್ಸವ, ವಿಷಮರ್ಧನ ಗುರುಗಂಗಾಧರೇಶ್ವರರ ಮಹಾತೀರ್ಥ ವಿತರಣೆ ನಡೆಯಲಿದೆ. ನಂತರ ಮಹಜಲಗಾಂವದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಮೆರವಣಿಗೆಯು ಸಾರೋಟದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ೧೨ ಗಂಟೆಗೆ ಧರ್ಮಸಭೆ ಸಿಂದಗಿಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ಜರುಗಲಿದೆ. ಜಾತ್ರೆಯಂಗವಾಗಿ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ, ಸಂಗಮೇಶ್ವರ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ವಿವಿಧ ಕ್ರೀಡೆಗಳು ನಡೆಯಲಿವೆ. ಸಂಜೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಜಾತ್ರೆಗೆ ವಿಜಯಪುರ, ಬಾಗಲಕೋಟ, ಯಾದಗಿರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಜಾತ್ರೆಯುದ್ದಕ್ಕೂ ಶ್ರೀಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಚನ್ನಸಂಗಯ್ಯ ಹಿರೇಮಠ ಇದ್ದರು.

