ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂತೋಷ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣ ನಿರ್ಮಾಣ ಹಾಗೂ ಪ್ರೇರಣೆಗೆ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಗಡೇದ ಹೇಳಿದರು.
ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಶನಿವಾರ ಜರುಗಿದ ಕಲಕೇರಿ ವಲಯ ಮಟ್ಟದ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವು ತರಗತಿಯ ಹೊರಗಡೆ ನಡೆಯುವುದರಿಂದ ಮಕ್ಕಳು ಅತಿ ಸಂತಸದಿAದ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಬಲವರ್ಧನೆಗೆ ಈ ಕಲಿಕಾ ಹಬ್ಬವು ಸಾಕಷ್ಟು ಪರಿಣಾಮಕಾರಿಯಾಗುವುದರ ಜೊತೆಗೆ ಇದು ಸಮುದಾಯದ ಮುಂದೆ ಜರುಗುವುದರಿಂದ ಪೋಷಕರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತಾಗುತ್ತದೆ. ಅಲ್ಲದೇ ಶಾಲೆಗಳನ್ನು ಶೈಕ್ಷಣಿಕವಾಗಿ ಬಲವರ್ಧನೆಗೊಳಿಸಲು ಸಾಕಷ್ಟು ಸಹಾಯ ಮಾಡುತ್ತದೆ ಎಂದರು.
ಕಲಕೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಶೈಲ ನಾಯ್ಕೋಡಿ ಮಾತನಾಡಿ, ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳು ತಮ್ಮೊಳಗಿನ ಉತ್ತಮ ಹವ್ಯಾಸ ಹಾಗೂ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಡಿವಾಳಪ್ಪ ಹಂದಿಗನೂರ ಮಾತನಾಡಿ, ಈ ಕಲಿಕಾ ಹಬ್ಬವು ಕಾಲಕ್ರಮೇಣ ಮಕ್ಕಳ ಕಲಿಕೆಯ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಲಕೇರಿ ವಲಯದ ಎಲ್ಲ ಶಾಲೆಗಳ ಮುಖ್ಯಗುರುಗಳು, ಸಹಶಿಕ್ಷಕರು, ನಿರ್ಣಾಯಕರು ಹಾಗೂ ಎಲ್ಲ ಮಕ್ಕಳು, ವಿವಿಧ ಶಾಲೆಗಳ ಎಸ್‌ಡಿಎಂಸಿ ಸದಸ್ಯರು ಇದ್ದರು.

