ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ : ಜೀವನ ಸಾಧನೆಗೆ ಉತ್ತಮ ಗುರಿ ಹೊಂದುವುದು ಇಂದಿನ ಪ್ರತಿಯೊಬ್ಬರ ಅಗತ್ಯತೆಯಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಬಂದೇನವಾಜ್ ಕೋರಬು ಹೇಳಿದರು.
ಪಟ್ಟಣದ ಮಹಾತ್ಮಾಗಾಂದಿ ಮೆಮೋರಿಯಲ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಜರುಗಿದ ವಾರ್ಷಿಕೋತ್ಸವ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು, ಮಕ್ಕಳಲ್ಲಿ ಅಗಾಧ ಶಕ್ತಿ ಸಾಮರ್ಥ್ಯವಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ಇಂದು ಸ್ಪರ್ಧಾತ್ಮಕ ಯುಗದಲ್ಲಿ ಓದು ಒಂದೇ ಗುರಿ ಹಾಗೂ ಪರಿಹಾರ ಅದಕ್ಕಾಗಿ ಸದಾ ಅಧ್ಯಯನಶೀಲರಾಗಿ ಮುಂದುವರೆದು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕೆಂದು ಶುಭ ಕೋರಿದರು.
ಸಂಸ್ಥೆಯ ಅಧ್ಯಕ್ಷ ಎ.ಎಂ.ತಾಂಬೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರ ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆಯಾಗಿದೆ. ಮುಂದಿನ ವರ್ಷದಿಂದ ಪದವಿ ಕಾಲೇಜನ್ನು ಪ್ರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಕಬೂಲ್ ಕೊಕಟನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಚಿಂತನಶೀಲ ವಿದ್ಯಾರ್ಥಿಗಳಿಂದ ಉತ್ತಮ ದೇಶ ನಿರ್ಮಾಣವಾಗಬಲ್ಲದು ಪಿಯುಸಿ ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಪರೀಕ್ಷೆ ಬರೆದು ಯಶಸ್ವಿಯಾಗಬೇಕು ಎಂದರು. ಪ್ರಾಚಾರ್ಯ ಎನ್.ಎಮ್.ವಾಲೀಕಾರ ಹಿರಿಯ ಉಪಾನ್ಯಾಸಕ ಎಂ.ಎಚ್.ಪಾನಪರೋಷ ಮಾತನಾಡಿದರು.
ಉಪನ್ಯಾಸಕರಾದ ಬಿ.ಐ.ಬಾಲಿ, ಬಿ.ಎಮ್.ಮಲ್ಹಾರಿ, ಎಸ್.ಎಸ್.ಬಾಗೇವಾಡಿ, ಎಂ.ಬಿ.ಅಗ್ನಿ, ಬಿ.ಐ. ತಳಕೇರಿ, ಎನ್.ಡಿ.ಜನಗೊಂಡ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

