ಚಡಚಣ ಪ.ಪಂ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆ | ಬಹುಮತವಿದ್ದರೂ ಬಿಜೆಪಿಗೆ ದಕ್ಕದ ಉಪಾಧ್ಯಕ್ಷ ಸ್ಥಾನ | ಕಾಂಗ್ರೆಸ್ ನ ಇಲಾಹಿ ನದಾಫ ಆಯ್ಕೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಸ್ಥಳೀಯ ಪ.ಪಂ ಗೆ ಶುಕ್ರವಾರ ನಡೆದ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ವರ್ಡ್ ನಂ.15 ರ ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಧೋತ್ರೆ ಅವರು ಅವಿರೋಧವಾಗಿ ಹಾಗೂ ಉಪಾಧ್ಯಕ್ಷರಾಗಿ ವಾರ್ಡ್ ನಂ.5 ರ ಕಾಂಗ್ರೆಸ್ ಸದಸ್ಯ ಇಲಾಹಿಸಾಬ ನದಾಫ ಅವರು ತಮ್ಮ ಪ್ರತಿಸ್ಪರ್ಧಿ ವಾರ್ಡ್ ನಂ.9 ರ ಬಿಜೆಪಿ ಸದಸ್ಯ ಶ್ರೀಕಾಂತ ಗಂಟಗಲ್ಲಿ ಅವರನ್ನು ನಾಲ್ಕು ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರು ಘೋಷಿಸಿದ್ದಾರೆ.
ಕಳೆದ ವರ್ಷ(2023) ರ ಡಿಸೆಂಬರ ತಿಂಗಳಿನಲ್ಲಿ ಪ.ಪಂ ನ ಒಟ್ಟು 16 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಬಿಜೆಪಿಯ 8 ಜನ ಸದಸ್ಯರು, 4 ಜನ ಕಾಂಗ್ರೆಸ್ ಹಾಗೂ 4 ಜನ ಪಕ್ಷೇತರರು ಆಯ್ಕೆಯಾಗಿದ್ದರು.
ಅಧ್ಯಕ್ಷ ಸ್ಥಾನವನ್ನು ಅನುಸೂಚಿತ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ‘ ಅ ‘ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿ ಪಡಿಸಲಾಗಿತ್ತು. ಅದರಂತೆ ಕಾಂಗ್ರೆಸ್ ನಲ್ಲಿ ಅನುಸೂಚಿತ ಜಾತಿಗೆ ಸೇರಿದ ಯಾವನೊಬ್ಬ ಸದಸ್ಯ ಇರದೇ ಇರುವದರಿಂದ ಅಧ್ಯಕ್ಷ ಗದ್ದುಗೆಗೆ ಕೇವಲ ಬಿಜೆಪಿಯ ಮಲ್ಲಿಕಾರ್ಜುನ ಧೋತ್ರೆ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯ ಶ್ರೀಕಾಂತ ಗಂಟಗಲ್ಲಿ, ಕಾಂಗ್ರೆಸ್ ನ ಇಲಾಹಿಸಾಬ ನದಾಫ ಹಾಗೂ ವಾರ್ಡ್ ನಂ. 6 ರ ಪಕ್ಷೇತರ ಸದಸ್ಯ ಚೇತನ ನಿರಾಳೆ ಅವರು ಸ್ಪರ್ಧಿಸಿದ್ದರು. ಆದರೆ ಪಕ್ಷೇತರ ಸದಸ್ಯ ಚೇತನ ನಿರಾಳೆ ಕೊನೆಗಳಿಗೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿ ಅವರು ತಮ್ಮ ನಾಮಪತ್ರವನ್ನು ಹಿಂಪಡೆದ ಪ್ರಯುಕ್ತ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಚುನಾವಣೆ ನಡೆಯಿತು.
ಇದೇ ಪ್ರಥಮ ಬಾರಿಗೆ ಪ.ಪಂ. ಆಡಳಿತ ಮಂಡಳಿಯ ಚುನಾವಣೆಯಲ್ಲಿ ವಿಜಯಪುರ ಸಂಸದ ರಮೇಶ್ ಜಿಗಜೇವಣಿಗಿ ಹಾಗೂ ನಾಗಠಾಣ ಶಾಸಕ ವಿಠ್ಠಲ್ ಕಟಕದೊಂಡ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಯಾವುದೇ ಅಹಿತಕರ ಘಟನೆ ಸಂಬಂಧಿಸಿದಂತೆ ಮುಂಜಾಗ್ರತಾಕ್ರಮವಾಗಿ ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಚಡಚಣ ಸಿಪಿಐ ಸುರೇಶ ಬೆಂಡೆಗೊಂಬಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.

