ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತೊಗರಿ ಖರೀದಿ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಲಿ ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಸಲಹೆ ನೀಡಿದರು.
ತ್ರಿವೇಣಿ ಕಾಂಪ್ಲೆಕ್ಷ ಆವರಣದಲ್ಲಿ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ವತಿಯಿಂದ ಆರಂಭಿಸಲಾದ ಎಂ.ಎಸ್.ಪಿ ಬೆಲೆಯ ತೊಗರಿ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವೈಜ್ಞಾನಿಕ ಬೆಲೆ ಸಿಗದೆ ಹೈರಾಣಾಗಿದ್ದ ತೊಗರಿ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಕನಿಷ್ಠ ಬೆಲೆಯಾದರೂ ಸಿಗಬೇಕೆಂಬ ಉದ್ದೇಶದಿಂದ ಜಾರಿ ಮಾಡಿದ ಯೋಜನೆಯ ಪ್ರಯೋಜನವನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕೆಂಬ ಉದ್ದೇಶದಿಂದ ದಾಸೋಹಿ ಕಂಪನಿಯು ಕೈಗೊಂಡಿರುವ ಕ್ರಮಗಳು ಶ್ಲಾಘನೀಯವಾಗಿದ್ದು ಹೆಚ್ಚಿನ ರೈತರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ನಿರ್ದೇಶಕ ಶಿವಾನಂದ ಗೋಠೆ ಮಾತನಾಡಿ ತೊಗರಿ ಬೆಳೆಗೆ ಸರ್ಕಾರ ನಿಗದಿ ಪಡಿಸಿದ ಕನಿಷ್ಠ ಬೆಂಬಲ ಬೆಲೆಗೆ ಜಿಲ್ಲೆಯಾದ್ಯಂತ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು ಹಲವೆಡೆ ಈಗಾಗಲೆ ಹಲವು ಕಡೆ ಗರಿಷ್ಠ ಮಟ್ಟದಲ್ಲಿ ಖರೀದಿಯು ನಡೆಯುತ್ತಿದೆ. ಈ ಮಧ್ಯೆ ದಾಸೋಹಿ ರೈತ ಉತ್ಪಾದಕ ಕಂಪನಿಯು ಅತ್ಯಂತ ಕಡಿಮೆ ಅವಧಿಯಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಖರೀದಿ ಆರಂಭಿಸಿ ರೈತರ ಮನೆ ಬಾಗಿಲಿಗೆ ಸೇವೆ ನೀಡುವ ಬದ್ದತೆ ತೋರಿರುವುದು ಶ್ಲಾಘನೀಯವಾದುದೆಂದರು.
ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ವೆಂಕನಗೌಡ ಪಾಟೀಲ ಮಾತನಾಡಿ ರೈತ ಉತ್ಪಾದಕ ಕಂಪನಿಗಳ ಸ್ಥಾಪನೆಯ ಹಿಂದಿನ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದ ಕೆಲವೇ ಕೆಲವು ರೈತ ಉತ್ಪಾದಕ ಸಂಸ್ಥೆಗಳಲ್ಲಿ ಇತ್ತೀಚಿಗೆ ಆರಂಭವಾಗಿರುವ ದಾಸೋಹಿ ಎಫ್.ಪಿ.ಓ ಹೆಸರು ಮಾಡುತ್ತಿರುವುದು ಈ ಭಾಗದ ಹೆಮ್ಮೆಯಾಗಿದ್ದು ನಾವೆಲ್ಲ ಸೇರಿ ಇನ್ನಷ್ಟು ಬೆಂಬಲಿಸಿದಲ್ಲಿ ರಾಷ್ಟç ಮಟ್ಟದಲ್ಲಿ ನಂಬರ ಒನ್ ಆಗಲಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಗುರು ತಾರನಾಳ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ತಾಳಿಕೋಟಿ ಎ.ಪಿ.ಎಂ.ಸಿ. ಕಾರ್ಯದರ್ಶಿ ರಾಜು ರಾಠೋಡ, ಎ.ಪಿ.ಎಂ.ಸಿ ನಿವೃತ್ತ ಅಧಿಕಾರಿ ಜಿ.ಎಂ ಯಡವಣ್ಣವರ, ವಿಶ್ರಾಂತ ಉಪ ತಹಸೀಲ್ದಾರ ಆರ್.ಬಿ ಸಜ್ಜನ, ಅಡತ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎಲ್ ಬಿರಾದಾರ, ಕಲ್ಲಣ್ಣ ಪ್ಯಾಟಿ, ಗೋಲಪ್ಪ ಗಂಗನಗೌಡ್ರ, ಆನಂದ ಸೂಳಿಭಾವಿ, ಭೀಮಣ್ಣ ಮಳಗೌಡರ, ಗುರಯ್ಯ ಮುದ್ದನೂರಮಠ, ಸೋಮನಗೌಡ ಬಿರಾದಾರ, ಶ್ರೀಶೈಲ ಮೇಟಿ, ಬಿ.ಎಂ ಪಾಟೀಲ, ಶಿವು ಕತ್ತಿ, ಬಿ.ಎಸ್ ಪಾಟೀಲ, ಬಸವರಾಜ ನರಸಣಗಿ ಸೇರಿದಂತೆ ಕಂಪನಿಯ ರೈತರು ಭಾಗಿಯಾಗಿದ್ದರು.
ಮಂಜುನಾಥ ದೊಡಮನಿ ಸ್ವಾಗತಿಸಿದರು. ಗುಂಡಪ್ಪ ಬಿರಾದಾರ ನಿರೂಪಿಸಿದರು, ಮಲ್ಲು ಕಾನ್ನಾಳ ವಂದಿಸಿದರು.

