ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ವಿವಿಧ 52 ದತ್ತಿ ಪ್ರಶಸ್ತಿಗಾಗಿ ಬರಹಗಾರರಿಂದ 2023 ರಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಿತ್ತು. ಮಕ್ಕಳ ಸಾಹಿತ್ಯ ವಿಭಾಗದಲ್ಲಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಬರೆದ ನಲುಗದಿರಲಿ ಪರಿಸರ ಶಿಶುಗೀತೆಗಳ ಸಂಕಲನಕ್ಕೆ “ವಸುದೇವ ಭೂಪಾಲಂ” ದತ್ತಿ ಪುರಸ್ಕಾರ ದೊರೆತಿದೆ. ದೇಶ ವಿದೇಶಗಳಿಂದ 4 ಸಾವಿರಕ್ಕೂ ಅಧಿಕ ಕೃತಿಗಳು ಸಲ್ಲಿಕೆಯಾಗಿದ್ದು, 12 ಜನರ ಪರಿಣಿತರ ಸಮಿತಿ ಆಯ್ಕೆ ಮಾಡಿದ ಪಟ್ಟಿಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ ನೇತೃತ್ವದ ತಂಡ ಎಲ್ಲ ಕೃತಿಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಬರಹಗಾರರಿಗೂ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೌಲಾಲಿ ಆಲಗೂರ ಇವರಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಿಂದಗಿ ಸಾಹಿತ್ಯ ಬಳಗ ಅಭಿನಂದನೆ ಜೊತೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

