ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಗಮನ ಸೆಳೆದ ದೇವಿಯರ ಬಡಿಗೆ ಆಟ
ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ಜಾತ್ರೆಯು ಶುಕ್ರವಾರ ಸಾವಿರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ಜರುಗಿತು.
ಶಕ್ರವಾರ ಬೆಳಿಗ್ಗೆಯಿಂದ ಭಕ್ತರು ಚೌಡೇಶ್ವರಿ ದೇವಿಯರಿಗೆ ಹರಕೆಗಳನ್ನು ಮುಟ್ಟಿಸಿ, ದೇವಿಯರಿಗೆ ಉಡಿತುಂಬಿ, ನೈವೇದ್ಯ ಅರ್ಪಿಸಿದರು.
ಮಧ್ಯಾಹ್ನ ಗ್ರಾಮದ ಮುಖಂಡರು ಬಾಜಾ ಭಜಂತ್ರಿ, ಡೊಳ್ಳು, ಕಳಸದೊಂದಿಗೆ ದೇವಾಲಯಕ್ಕೆ ಹೋಗಿ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಡಿಗೇರ ಮನೆತನದ ಅರ್ಚಕರು ದೇವಿಯರ ಮುಖಗಳನ್ನು ಧರಿಸಿ ಗ್ರಾಮದ ಹಳೆ ಅಗಸಿಯಲ್ಲಿ ಗ್ರಾಮದ ಎಡ ಮತ್ತು ಬಲ ಸಮುದಾಯದ ಪ್ರಮುಖರಿಗೆ ಗಂಧವನ್ನು ನೀಡಿದರು. ನೂರಾರು ಭಕ್ತರೊಂದಿಗೆ ಬಡಿಗೆಯ ಆಟ ಆಡುತ್ತಾ ಭಕ್ತ ಸಮೂಹಕ್ಕೆ ದರ್ಶನ ನೀಡಿದರು. ಸಾಯಂಕಾಲ ೬ಕ್ಕೆ ಬಡಿಗೆ ಆಟ ಆಡಿ ಹಳ್ಳದ ದಂಡೆಯ ಕಟ್ಟೆಯ ಮೇಲೆ ದೇವಿಯರು ಆಸೀನರಾದರು. ನೋಡುವ ಜನರ ದೃಷ್ಟಿ ದೇವಿಯರಿಗೆ ತಾಕಬಾರದೆಂದು ಹಡಪದ ಸಮಾಜದವರು ಸೆಗಣಿ ಮತ್ತು ತಳವಾರ ಸಮಾಜದವರು ಬಾನ ಎರಚಿದರು. ದೇವಿಯರು ಬಡಿಗೆ ಆಟ ಆಡಲು ಸ್ಥಳದ ಅನುಕೂಲಕ್ಕಾಗಿ ಸೇರಿದ ಜನತೆಯನ್ನು ಚದುರಿಸಲು ಮಡಿವಾಳ ಸಮಾಜದವರು ರಾಡಿಯಿಂದ ಎದ್ದಿದ ಕೌದಿಯನ್ನು ಹೊಚ್ಚಿಕೊಂಡು ಜನರ ಮಧ್ಯೆ ನಡೆದರು. ಹಡಪದ ಸಮಾಜದವರು ಬಾರಿಗಿಡದ ಕಂಟಿ ಎಳೆದಾಡುತ್ತಿರುವದು ನೋಡುಗರ ಕಣ್ಮನ ಸೆಳೆಯಿತು.

