ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾತೃಭಾಷೆ ಕಲಿಯುವ ಮೊದಲ ಭಾಷೆ. ಅದು ಪ್ರತಿಯೊಂದು ಸಂಸ್ಕೃತಿಯ ಮತ್ತು ಆತ್ಮವಿಶ್ವಾಸದ ಪ್ರತೀಕ. ಅದು ನಮ್ಮ ಕನಸನ್ನು ಅರಳಿಸುವ ಹೃದಯದ ಭಾಷೆಯಾಗಿದೆ. ಮಾತೃಭಾಷೆಯ ಉಳಿವಿಗೆ ಪ್ರತಿ ಕುಟುಂಬ ಶ್ರಮಿಸಬೇಕಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ಶುಕ್ರವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಮಾತೃಭಾಷೆ ಮನುಷ್ಯನ ಮೌಲ್ಯಗಳ ವಾಹಕ. ಅದು
ನಮ್ಮನ್ನು ರಾಷ್ಟ್ರೀಯತೆಯೊಂದಿಗೆ ಸಂಪರ್ಕಿಸಿ, ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುತ್ತದೆ. ಮಾತೃಭಾಷೆ ಆತ್ಮದ ಧ್ವನಿಯಾಗಿದ್ದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ, ಭಾಷಾ ವೈವಿಧ್ಯತೆಯನ್ನು ಉತ್ತೇಜಿಸಲು ಮಾತೃಭಾಷೆಯ ಸಂರಕ್ಷಣೆ ಬಹು ಅಗತ್ಯವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ,
ಮಗುವಿಗೆ ಯೋಚಿಸಲು, ಅರ್ಥಮಾಡಿಕೊಳ್ಳಲು ಮತ್ತು ತಿಳುವಳಿಕೆಯನ್ನು ನೀಡುವದೇ ಮಾತೃಭಾಷೆ. ಮಾತೃಭಾಷಾ ಶಿಕ್ಷಣವು ಮಗುವಿನ ಶೈಕ್ಷಣಿಕ ಕಾರ್ಯಕ್ಷಮತೆ, ಅರಿವಿನ ಬೆಳವಣಿಗೆ ಮತ್ತು ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ರಾಷ್ಟ್ರದ ಮನೆ ಭಾಷೆಯನ್ನು ಮಾತೃಭಾಷೆಯು ಸೂಚಿಸುತ್ತದೆ. ಅದು ವಿಷಯದ ಉತ್ತಮ ತಿಳುವಳಿಕೆಯನ್ನು ಸಕ್ರಿಯಗೊಳಿಸುವುದರೊಂದಿಗೆ, ಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ,
ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ,
ನವೀನ ಬಂಡೆನ್ನವರ, ಸಚಿನ ಅವಟಿ, ಜಯಶ್ರೀ ಬಂಗಾರಿ, ಮಧುಮತಿ ನಿಕ್ಕಂ, ಸರೋಜಿನಿ ಕಟ್ಟಿಮನಿ, ರೇಣುಕಾ ಭಜಂತ್ರಿ, ಎಂ ಎಸ್ ಬಾಗಲಕೋಟ, ಎಂ ಎಂ ವಾಡೇದ, ಎಂ ವ್ಹಿ ಭಜಂತ್ರಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.

