ಬಂಜಾರಾ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮನೆ ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಪ್ರೇರಣೆಯಾಗುವಂತೆ ಆತ್ಮ ವಿಶ್ವಾಸ, ಆತ್ಮಸ್ಥೈರ್ಯ ಮೂಡಿಸುವ ಕಾರ್ಯ ನಡೆಯಬೇಕು. ಸಂಸ್ಕಾರಯುತ ಬದುಕು ವ್ಯಕ್ತಿಯ ವ್ಯಕ್ತಿತ್ವ ರೂಪಿಸುತ್ತದೆ. ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ನೀಡುವುದು ಮುಖ್ಯವಾಗಿದೆ ಎಂದು ಕ್ಲಸ್ಟರ್ ೨೪ರ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎ.ಬಿರಾದಾರ ಹೇಳಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭ ಹಾರೈಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದಜತೆಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪಾರ್ಧಾ ಮನೋಭಾವನೆ ಮೂಡಲು ಸಾಧ್ಯ. ಮಕ್ಕಳು ಅಂಕಗಳಿಗೆ ಸೀಮಿತವಾಗದೇ, ಜ್ಞಾನ ವಿಕಾಸಗೊಳಿಸಬೇಕು. ಸಾಮಾಜಿಕ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಬಂಜಾರಾ ಪಿಯು ಕಾಲೇಜಿನ ಪ್ರಾಚಾರ್ಯರಾದ ಎಸ್.ಬಿ.ಪವಾರರವರು ಮಾತನಾಡುತ್ತ. ವಿದ್ಯಾರ್ಥಿಗಳು ನಿತ್ಯ ಪರಿಶ್ರಮ ಪಡಬೇಕು. ತಾಳ್ಮೆಯಿಂದ ವರ್ತಿಸಬೇಕು. ಆಶಾವಾದಿಗಳಾಗಿ ಬದುಕಬೇಕು. ಪಾಲಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು ಅವಶ್ಯ ಎಂದರು. ಉತ್ತಮ ಆರೋಗ್ಯ ಕಾಪಾಡಿಕೊಂಡು ಸಂಸ್ಕಾರವAತಿಕೆ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿಯವರು ಮಾತನಾಡುತ್ತ. ಮಕ್ಕಳಿಗೆ ಬಾಲ್ಯದಿಂದಲೇ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಿದಾಗ ಮಗು ಬಹುಬೇಗ ವಿಷಯವನ್ನು ಗ್ರಹಿಸುವುದಲ್ಲದೆ. ಭಾವನಾತ್ಮಕ ಗುಣಗಳು ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಸಹಾಯಕವಾಗುತ್ತದೆ. ತಂದೆ-ತಾಯಿಗಳು ತಮ್ಮ ಮಗುವಿನ ಶಿಕ್ಷಣಾ ಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಎಲ್.ಚವ್ಹಾಣ್, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಂದೀಪ ರಾಠೋಡ, ಎಸ್.ವ್ಹಿ.ದೇಶಪಾಂಡೆ, ವಿದ್ಯಾರ್ಥಿ ಪ್ರತಿನಿಧಿ ಮಾಂತೇಶ ಕಿತ್ಲಿ, ಸಭಾಪತಿ ಸುಶ್ಮಿತಾ ಚವ್ಹಾಣ್, ವಿದ್ಯಾರ್ಥಿನಿ ಪ್ರತಿನಿಧಿ ಮಾಧುರಿ ರಾಠೋಡ, ಜೆ.ಕೆ.ರಾಠೋಡ, ಆರ್.ಎನ್.ಬಕಾಟೆ ಸೇರಿದಂತೆ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ವೇಳೆ ಕಾರ್ಯಕ್ರಮದ ಸ್ವಾಗತ ಎ.ಎಂ.ನಾಗೊಂಡ, ವಂದನಾರ್ಪಣೆ ಎಸ್.ಕೆ.ಶಿಂಧೆ, ನಿರೂಪಣೆ ಆರ್.ವ್ಹಿ.ಭುಜಂಗನವರ ನೆರವೇರಿಸಿದರು.

